ವಾಲಿಬಾಲ್ ಚಾಂಪಿಯನ್‌ಷಿಪ್ ಮುಡಿಗೇರಿಸಿಕೊಂಡು ಕೆಆರ್‌ಎಸ್ ತಂಡ. 
ಜಿಲ್ಲೆ

ಕಾರ್ತಿಕ ಮಾಸದ ದೀಪೋತ್ಸವ ಸಂಪನ್ನ

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ಹಳೇಬೀಡು ಗ್ರಾಮದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ 6ನೇ ವರ್ಷದ ಕಾರ್ತಿಕ ಮಾಸದ ದೀಪೋತ್ಸವ ಮತ್ತು ಪೂಜಾ ಮಹೋತ್ಸವ ಸುತ್ತಮುತ್ತಲ ಗ್ರಾಮಗಳ ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.

ಶ್ರೀ ಮಲೆ ಮಹದೇಶ್ವರಸ್ವಾಮಿ ಸೇವಾ ಸಮಿತಿ ವತಿಯಿಂದ ಎರಡು ದಿನಗಳ ಕಾಲ ಆಯೋಜನೆಗೊಂಡಿದ್ದ ಪೂಜಾ ಮಹೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಕಡೇ ಕಾರ್ತಿಕ ಸೋಮವಾರದಂದು ದೇವರನ್ನು ವಿಧವಿಧದ ಹೂವುಗಳಿಂದ ಅಲಂಕರಿಸಿ ಅಭಿಷೇಕ ಸೇರಿದಂತೆ ವಿವಿಧ ವಿಶೇಷ ಪೂಜಾ ಕೈಂಕರ್ಯಗಳನ್ನು ಅರ್ಚಕ ಎಚ್.ಎನ್. ಶಿವಕುಮಾರಸ್ವಾಮಿ ನೇತೃತ್ವದಲ್ಲಿ ನಡೆಸಲಾಯಿತು. ಮಹಾಮಂಗಳಾರತಿ ನಂತರ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಮೂಲಕ ಪ್ರಸಾದ ವಿತರಿಸಲಾಯಿತು.

ಕೆಆರ್‌ಎಸ್ ತಂಡ ಚಾಂಪಿಯನ್‌ಷಿಪ್: ಭಾನುವಾರ ಪೂಜಾ ಮಹೋತ್ಸವದ ಅಂಗವಾಗಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. 18ಕ್ಕೂ ಹೆಚ್ಚು ತಂಡಗಳು ಭಾಗಿಯಾಗಿದ್ದ ಪಂದ್ಯಾವಳಿಯಲ್ಲಿ ಕೆಆರ್‌ಎಸ್ ತಂಡವು ವಿಜಯಶಾಲಿಯಾಗುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಹಳೇಬೀಡು ತಂಡ ರನ್ನರ್‌ಅಪ್ ಸ್ಥಾನ ಗಳಿಸಿತು. ಚಾಂಪಿಯನ್ ತಂಡಕ್ಕೆ ಸೇವಾ ಸಮಿತಿ ವತಿಯಿಂದ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಸೇವಾ ಸಮಿತಿ ಗೌರವಾಧ್ಯಕ್ಷ ಎಚ್.ಎಂ. ರಾಜಶೇಖರ ಶೆಟ್ಟಿ, ಉಪಾಧ್ಯಕ್ಷ ಎಚ್.ವಿ. ರಮೇಶ್, ಪ್ರಧಾನ ಕಾರ್ಯದರ್ಶಿ ಎಚ್.ಜೆ. ಮಹದೇವಶೆಟ್ಟಿ, ಕಾರ್ಯದರ್ಶಿ ಎಸ್.ಗಿರೀಶ್, ಸಹಕಾರ್ಯದರ್ಶಿ ಎಚ್.ಎಸ್. ಮರಿಸಿದ್ದನಾಯಕ, ಖಜಾಂಚಿ ಎಚ್.ಸಿ. ಮಂಜು, ಸಂಚಾಲಕ ಎಚ್.ಎಸ್. ದೇವರಾಜು, ಸಂಘಟನಾ ಕಾರ್ಯದರ್ಶಿ ಎಚ್.ಆರ್. ಶಿವರಾಜು, ಸಮಿತಿ ಸದಸ್ಯರಾದ ಎಚ್.ಡಿ. ವೀರೇಶ್, ಎಚ್.ಎಸ್. ಚಂದ್ರು, ಹೇಮಚಂದ್ರನಾಯಕ, ಎಚ್.ಕೆ. ಗೋವಿಂದರಾಜು ಇತರರಿದ್ದರು.