ಆಲೂರು: ಹಿಂದು ಧರ್ಮದಲ್ಲಿ ನಾಗ ದೇವರಿಗೆ ವಿಶೇಷ ಮಹತ್ವವಿದೆ. ನಾಗರ ಪಂಚಮಿ ದಿನದಂದು, ಸಂತೋಷ ಮತ್ತು ಸಮೃದ್ಧಿ, ಹೊಲಗಳಲ್ಲಿನ ಬೆಳೆಗಳ ರಕ್ಷಣೆಗಾಗಿ ಹಾವುಗಳನ್ನು ಪೂಜಿಸಲಾಗುತ್ತದೆ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿಗೆ ಸೇರಿದ ಕಾರ್ಜುವಳ್ಳಿ ಗ್ರಾಮದ ಬಾಳೆಹೊನ್ನೂರು ರಂಭಾಪುರಿ ವೀರಾಸಿಂಹಾಸನ ಶಾಖಾ ಸಂಸ್ಥಾನ ಮಠವಾದ ಕಾರ್ಜುವಳ್ಳಿ ಹಿರೇಮಠದಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗ ದೇವರ ವಿಗ್ರಹಗಳಿಗೆ ಕ್ಷೀರಾಭಿಷೇಕ ನೆರವೇರಿಸಿ ಮಾತನಾಡಿದರು. ಪೌರಾಣಿಕ ಕಾಲದಿಂದಲೂ ಸರ್ಪಗಳನ್ನು ದೇವರಂತೆ ಪೂಜಿಸಲಾಗುತ್ತದೆ. ನಾಗರ ಪಂಚಮಿಯಂದು ನಾಗದೇವತೆ ಪೂಜಿಸುವುದು ತುಂಬಾ ಪುಣ್ಯದ ಕೆಲಸ. ನಾಗರ ಆರಾಧನೆಯಿಂದ ರಾಹು-ಕೇತು ಮತ್ತು ಕೆಲ ಸರ್ಪ ದೋಷಗಳ ದುಷ್ಪರಿಣಾಮಗಳಿಂದ ಮುಕ್ತಿ ಪಡೆಯಬಹುದು. ನಾಗದೇವತೆ ಜತೆಗೆ ಶಿವನನ್ನು ಪೂಜಿಸುವ ಮತ್ತು ರುದ್ರಾಭಿಷೇಕವನ್ನು ಮಾಡಿದರೆ ಎಲ್ಲ ತೊಂದರೆಗಳನ್ನು ದೂರಮಾಡಿ ಕೊಳ್ಳಬಹುದು ಎಂಬ ನಂಬಿಕೆಯಿದೆ ಎಂದು ತಿಳಿಸಿದರು.