ಚಿತ್ರದುರ್ಗ: ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರ ಶೌರ್ಯ, ಪರಾಕ್ರಮ ಪ್ರತಿಯೊಬ್ಬ ಪ್ರಜೆಯೂ ಮೆಚ್ಚುವಂತದ್ದು. ಅವರ ಪರಿಶ್ರಮದ ಹೋರಾಟದಿಂದ ಜಯಸಾಧಿಸಲು ಸಾಧ್ಯವಾಗಿದ್ದು, ಎಂದೆಂದಿಗೂ ಅವಿಸ್ಮರಣೀಯ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಐಎಂಎ ಸಭಾಂಗಣದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಹುತಾತ್ಮರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಗಡಿಗಳಲ್ಲಿ ಸೈನಿಕರು ಪಡುವ ಕಷ್ಟವನ್ನು ನಾನು ಕಣ್ಣಾರೆ ಖಂಡಿದ್ದೇನೆ. ಪ್ರತಿ ಕಿ.ಮೀಗೂ ನಿಯೋಜನೆಗೊಂಡ ಯೋಧರು ಕೊರೆಯುವ ಚಳಿ, ಮಳೆ ಲೆಕ್ಕಿಸದೆ, ಭಾರತಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಹೋರಾಡುತ್ತಾರೆ. ಯುದ್ಧಗಳ ವೇಳೆ ವೀರ ಮರಣವನ್ನಪ್ಪುತ್ತಾರೆ. ಇದು ಇಡೀ ದೇಶಕ್ಕೆ ದುಃಖಕರ ಸಂಗತಿ ಎಂದರು.
ಪ್ರಜೆಗಳು ದೇಶದೊಳಗೆ ನೆಮ್ಮದಿಯಿಂದ ಇರಲು ಸೈನಿಕರು ಕಾರಣ. ಸೈನ್ಯಕ್ಕೆ ಸೇರಿ ತಮ್ಮ ಸುಖ ಬದಿಗಿಟ್ಟು ಶತ್ರುಗಳಿಂದ ರಕ್ಷಿಸುವಲ್ಲಿ ನಿರತರಾಗುತ್ತಾರೆ. ಮನೆಯಲ್ಲಿನ ಕಷ್ಟಗಳನ್ನು ಮರೆತು ರಾಷ್ಟ್ರಸೇವೆಗೆ ಮುಂದಾಗುವ ವೀರಯೋಧರ ಕಾರ್ಯ ಎಷ್ಟು ಸ್ಮರಿಸಿದರು ಸಾಲದು ಎಂದು ಬಣ್ಣಿಸಿದರು.
ಕಳೆದ 50-60 ವರ್ಷದಿಂದ ಸೈನಿಕರಿಗೆ ಸರಿಯಾದ ಸೌಲಭ್ಯ ಇರಲಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ಸೌಕರ್ಯ ದೊರೆಯುತ್ತಿವೆ. ಗಡಿ ಪ್ರದೇಶಗಳನ್ನು ಮತ್ತಷ್ಟು ಬಲಪಡಿಸಬೇಕು. ಆಧುನಿಕ ಶಸ್ತ್ರಾಸ್ತಗಳನ್ನು ನೀಡುವ ಮೂಲಕ ಯೋಧರಿಗೆ ಶಕ್ತಿ ತುಂಬುವ ಕಾರ್ಯ ಪ್ರಧಾನಿ ಅವರು ಮಾಡಬೇಕು ಎಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷ, ಮಾಜಿ ಸೈನಿಕ ಸತ್ಯನಾರಾಯಣ ರೆಡ್ಡಿ, ಕಾರ್ಗಿಲ್ ಯುದ್ಧ ಗೆದ್ದು ಭಾರತಾಂಬೆಗೆ ಕಿರೀಟವನ್ನು ನಮ್ಮ ಯೋಧರು ತೊಡಿಸಿದ್ದಾರೆ. ಆದರೆ, ಸೈನಿಕರಿಗೆ ಸರ್ಕಾರದಿಂದ ಸಿಗಬೇಕಾದ ಅಗತ್ಯ ಸೌಕರ್ಯ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬೇಸರಿಸಿದರು.
ಚಿತ್ರದುರ್ಗದಲ್ಲಿ ಮಾಜಿ ಸೈನಿಕರು ಸಭೆ ನಡೆಸಲು ನಿಗದಿತ ಸ್ಥಳವಿಲ್ಲ. ವೀರಸೌಧವನ್ನು ಸಂಘಕ್ಕೆ ನೀಡಿದರೆ, ಸರ್ಕಾರದ ನೆರವು ಆಪೇಕ್ಷಿಸದೆ, ನಾವೇ ನಿರ್ವಹಿಸಿಕೊಂಡು ಹೋಗುತ್ತೇವೆ. ಅಲ್ಲದೆ, ಸೈನ್ಯಕ್ಕೆ ಸೇರಲಿಚ್ಛಿಸುವವರಿಗೆ ಒಂದಿಷ್ಟು ತರಬೇತಿಯೊಂದಿಗೆ ಜಾಗೃತಿ ಮೂಡಿಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ 720 ಸೈನಿಕರಿಗೆ ಮೌನಾಚರಣೆಯೊಂದಿಗೆ ಗೌರವ ಸಲ್ಲಿಸಲಾಯಿತು. ಎಎಸ್‌ಪಿ ಕುಮಾರಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ್, ನವೀನ್ ಚಾಲುಕ್ಯ, ಸಂಪತ್‌ಕುಮಾರ್, ಮೋರ್ಚಾದ ಅಧ್ಯಕ್ಷ ಪಾಲಯ್ಯ, ಮಾಜಿ ಸೈನಿಕರಾದ ಮಹೇಶ್ವರಪ್ಪ, ಕೃಷ್ಣಾರೆಡ್ಡಿ, ನಾರಾಯಣ, ಸೈಯದ್ ಜಾಕಿರ್, ಸಣ್ಣ ಬೋರಯ್ಯ ಇತರರಿದ್ದರು.