ಚಾಮರಾಜನಗರ: ಭಾರತೀಯ ಯೋಧರು ದೇಶದ ಹಿತ ಕಾಯಲು ತನ್ನನ್ನು ತಾನು ಅರ್ಪಿಸಿಕೊಂಡಿದ್ದು, 1999ರ ಕಾರ್ಗಿಲ್ ಯುದ್ಧದಲ್ಲಿ ಗೆಲುವು ಸಾಧಿಸಿದ ಹುತಾತ್ಮ ಸೈನಿಕರು ಸದಾ ಸ್ಮರಣೀಯರು ಎಂದು ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣ ಸ್ವಾಮಿ (ಪಾಪು) ಅಭಿಪ್ರಾಯಪಟ್ಟರು.
ನಗರದ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಭಾರತ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಮತ್ತು ರಂಗದೀವಿಗೆ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚೈನಾ ದೇಶದವರು ನಂಬಿಕೆ ದ್ರೋಹಿಗಳು, 1962ರಲ್ಲಿ ರಾತ್ರೋರಾತ್ರಿ ನಮ್ಮ ದೇಶದ ಸೈನಿಕರ ಮೇಲೆ ದಾಳಿ ನಡೆಸಿದ್ದರು. ಆದರೂ ಆ ದಾಳಿಯನ್ನು ಎದುರಿಸುವ ಸಮರ್ಥ ಸೇನಾನಿಗಳು ಭಾರತದಲ್ಲಿರುವುದರಿಂದ ಅಪಾಯ ಸಂಭವಿಸಲಿಲ್ಲ. ಜಗತ್ತಿನ 57 ಮುಸ್ಲಿಂ ರಾಷ್ಟ್ರಗಳಲ್ಲಿ ಒಂದು ಕೋಟಿಗೂ ಹೆಚ್ಚು ಭಾರತೀಯರು ವಾಸವಾಗಿದ್ದಾರೆ. ನಾವುಗಳು ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಆ ರಾಷ್ಟ್ರಗಳನ್ನು ಅವಲಂಬಿಸುತ್ತೇವೆ ಇಂತಹ ವ್ಯಾವಹಾರಿಕ ಸಂಬಂಧವನ್ನು ಗಟ್ಟಿಗೊಳಿಸುವ ಬದಲು ಶತ್ರುತ್ವವನ್ನು ಸಾಧಿಸುತ್ತಿವೆ ಎಂದರು.
ಅಂದಿಗಿಂತಲೂ ಇಂದು ನಮ್ಮ ಸೈನ್ಯದ ಬಲ ಸದೃಢವಾಗಿದೆ. ಶತ್ರುಗಳನ್ನು ಎದುರಿಸುವ ಶಕ್ತಿ ಸೈನ್ಯಕ್ಕಿದೆ. 1965ರಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿ ರವರು ಜೈ ಜವಾನ್, ಜೈ ಕಿಸಾನ್ ಎಂಬ ಧ್ಯೇಯ ವಾಕ್ಯವನ್ನು ಕೊಟ್ಟಿದ್ದಾರೆ ಅದರಂತೆ ನಾವೆಲ್ಲರೂ ಸಾಗೋಣ ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಅವಲೋಕಿಸಿದರೆ ಶೇ.50ರಷ್ಟು ಯುವಶಕ್ತಿ ಇರುವುದು ನಮ್ಮ ದೇಶದಲ್ಲಿ ಮಾತ್ರ. ಪ್ರಪಂಚದ ಹಲವಾರು ದಾಳಿಗಳನ್ನು ಎದುರಿಸಿರುವ ಭಾರತ, ತನ್ನ ಸಂಸ್ಕೃತಿ ಆಧಾರ ವಿಚಾರಗಳನ್ನು ಎಂದಿಗೂ ಬಿಟ್ಟು ಕೊಟ್ಟಿಲ್ಲ. ತನ್ನ ಶ್ರೇಷ್ಠ ನಾಗರೀಕತೆಯ ಮೂಲಕ ಪ್ರಪಂಚದಲ್ಲಿ ಅಗ್ರಸ್ಥಾನ ಪಡೆದಿದೆ. ಕಾರ್ಗಿಲ್ನಲ್ಲಿ ಹೋರಾಡಿ ಜಯ ತಂದುಕೊಟ್ಟ, ಆ ಹುತಾತ್ಮ ಯೋಧರ ತ್ಯಾಗ ಬಲಿದಾನವನ್ನು ಯುವ ಪೀಳಿಗೆ ಎಂದೂ ಮರೆಯುವಂತಿಲ್ಲ. ಸೈನ್ಯಕ್ಕೆ ಸೇರಬಯಸುವ ಯುವಕರು ಅಗ್ನಿಪಥ್ ಅಂತಹ ಸೇನಾಪಡೆಗೆ ಸೇರುವ ಮೂಲಕ ದೇಶ ಸೇವೆಯನ್ನು ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಂಗ ದೀವಿಗೆ ಸಂಸ್ಥೆಯ ಅಧ್ಯಕ್ಷ ಕಲೆ ನಟರಾಜು, ನಿಲಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.