ಸಂಕೇಶ್ವರ: ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ೭ನೇ ವೇತನ ಅನ್ವಯವಾಗಲಿದ್ದು, ಇದರಿಂದ ವಾರ್ಷಿಕ ೧.೨೦ ಕೋಟಿ ರೂ. ಹೊರೆಯಾಗಲಿದೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಇಲ್ಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ಕಾರ್ಮಿಕರು ಕಾರ್ಖಾನೆಯ ಮೂಲಾಧಾರವಾಗಿದ್ದು, ಅವರಿಗೆ ೧೦ ಲಕ್ಷ ರೂ.ಗಳ ಜೀವ ವಿಮೆ, ೨೦ ಲಕ್ಷ ರೂ.ಗಳ ಅಪಘಾತ ವಿಮೆ, ರಿಯಾಯಿತಿ ದರದಲ್ಲಿ ಸಕ್ಕರೆ, ಗ್ರ‍್ಯಾಚ್ಯುಟಿ ಸೇರಿ ವಿವಿಧ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಲಾಗುವುದು ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಹಿರಾಶುಗರ್ ಕಾರ್ಖಾನೆಗೆ ಮರುಜೀವ ನೀಡುವ ಮೂಲಕ ಕಾರ್ಖಾನೆಯನ್ನು ಗತವೈಭವಕ್ಕೆ ಕೊಂಡೊಯ್ಯಲು ಜೊಲ್ಲೆ ಪರಿವಾರ ಸಹಕರಿಸಲಿದೆ ಎಂದರು.
ಕಾರ್ಖಾನೆ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಸಂಘಟನೆ ಅಧ್ಯಕ್ಷ ಮೋಹನ ಕೋಠಿವಾಲೆ ಸಂಯೋಜಿಸಿದರು. ರಕ್ತದಾನ ಶಿಬಿರ ಹಾಗೂ ಕಾರ್ಮಿಕರ ಪಾದಪೂಜೆ ಕಾರ್ಯಕ್ರಮ ಜರುಗಿತು.
ಕಾರ್ಮಿಕರನ್ನು ಹಾಗೂ ಕಾರ್ಮಿಕರ ಸಂಘಟನೆಯಿಂದ ಜೊಲ್ಲೆ ದಂಪತಿಯನ್ನು ಸನ್ಮಾನಿಸಲಾಯಿತು.
ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕರಾದ ಬಸವರಾಜ ಮರಡಿ, ಬಾಬಾಸಾಹೇಬ ಅರಬೋಳೆ, ಸುರೇಂದ್ರ ದೊಡ್ಡಲಿಂಗನವರ, ಪ್ರಭುದೇವ ಪಾಟೀಲ, ಶಾರದಾ ಪಾಟೀಲ, ಶಿವನಾಯಿಕ ನಾಯಿಕ, ಭಾರತಿ ಹಂಜಿ, ಮಲ್ಲಿಕಾರ್ಜುನ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಸಾತಪ್ಪ ಕರ್ಕಿನಾಯಿಕ, ರವೀಂದ್ರ ಚೌಗಲಾ, ಪವನ ಪಾಟೀಲ, ಜಯಪ್ರಕಾಶ ಸಾವಂತ, ಪರಗೌಡ ಪಾಟೀಲ, ಲಕ್ಷ್ಮಣ ಹಂಚಿನಮನಿ ಇತರರು ಇದ್ದರು. ಕಚೇರಿ ಅಧೀಕ್ಷಕ ಸುಭಾಷ ನಾಶಿಪುಡಿ ನಿರೂಪಿಸಿದರು. ಬಾಬಾಸಾಹೇಬ ಅರಬೋಳೆ ವಂದಿಸಿದರು.