ಹಳಿಯಾಳ: ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಕಬ್ಬು ಕಟಾವು ಹಾಗೂ ಸಾಗಾಟ ವೆಚ್ಚ ನಿಗದಿಪಡಿಸಲು ಸ್ಥಳೀಯ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಶನಿವಾರ ಕರೆದ ತುರ್ತು ಸಭೆಯನ್ನು ಕಬ್ಬು ಬೆಳೆಗಾರರು ಅರ್ಧದಲ್ಲಿಯೇ ಮೊಟಕುಗೊಳಿಸಿ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ದಿಕ್ಕಾರ ಕೂಗಿ ಸಭೆ ಬಹಿಷ್ಕರಿಸಿ ಹೊರ ನಡೆದರು.
ಪಟ್ಟಣದ ಹೆಸ್ಕಾಂ ಕಚೇರಿಯ ಬಳಿಯಿರುವ ಡಾ. ಬಾಬು ಜಗಜೀವನರಾಂ ಸಭಾಭವನದಲ್ಲಿ ಶುಕ್ರವಾರ ಕರೆದಿದ್ದ ಕಬ್ಬು ಬೆಳೆಗಾರರ ಸಭೆಯಲ್ಲಿ ಕಾರ್ಖಾನೆಯ ಕ್ರಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಆರಂಭದಲ್ಲಿ ಕಾರ್ಖಾನೆಯ ಕಬ್ಬು ವಿಭಾಗದವರನ್ನು ಬೆಳೆಗಾರರು ತರಾಟೆಗೆ ತೆಗೆದುಕೊಂಡರು. ಮಹತ್ವದ ಸಭೆಯೊಂದನ್ನು ತರಾತುರಿಯಲ್ಲಿ ಆಯೋಜಿಸಿರುವುದು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಯಿತು. ಸಭೆಯನ್ನು ಮತ್ತೊಮ್ಮೆ ಕರೆಯಬೇಕು, ಎಲ್ಲರಿಗೂ ಮುಂಚಿತವಾಗಿ ತಿಳಿಸಬೇಕು, ಕರಪತ್ರದ ಮೂಲಕ ಸಭೆಯ ಕುರಿತು ಪ್ರಚಾರ ಮಾಡಬೇಕು. ಅಲ್ಲಿಯವರೆಗೂ ಈ ಸಭೆಯನ್ನು ನಡೆಸಬಾರದು ಎಂದು ಹೊರನಡೆದರು. ಕಾರ್ಖಾನೆಯ ಕಬ್ಬು ವಿಭಾಗದ ಶಂಕರ ಅಂಗಡಿ, ಟಿ.ಬಿ. ಪಾಟೀಲ, ಎಸ್.ವಿ. ಬಡಿಗೇರ, ಪಿಎಸ್ಐ ಯಲ್ಲಾಲಿಂಗ ಕೊಣ್ಣೂರ ಇದ್ದರು.
ಸಭೆ ಬಹಿಷ್ಕರಿಸಿ ಹೊರ ಬಂದು ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಸಂದೀಪಕುಮಾರ ಉಡಚಪ್ಪ ಬೊಬಾಟೆ, ದೂರದ ಬೈಲಹೊಂಗಲ, ಕಿತ್ತೂರ ಭಾಗದ ರೈತರಿಗೆ ಹಾಗೂ ಹಳಿಯಾಳದ ರೈತರಿಗೆ ಕಬ್ಬು ಕಟಾವು ಸಾಗಾಟದ ಒಂದೇ ದರ ಪ್ರತಿ ಟನ್ಗೆ 770 ರೂ. ಆಕರಿಸಿದ ಕ್ರಮ ಸರಿಯಾಗಿಲ್ಲ, ಇದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಮೊದಲು ಸರಿಪಡಿಸಬೇಕು. ಕಾರ್ಖಾನೆಯವರು ತಮ್ಮ ಮೀಸಲು ಕ್ಷೇತ್ರದಿಂದ ಕಬ್ಬನ್ನು ತರಿಸಿಕೊಳ್ಳಲಿ ಅದನ್ನು ಬಿಟ್ಟು ಹೊರಗಡೆಯಿಂದ ತರಿಸಲು ನಾವು ಅವಕಾಶ ನೀಡಲಾರೆವು ಎಂದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ವಿ. ಘಾಡಿ, ತಾಲೂಕು ಕಾರ್ಯದರ್ಶಿ ಅಶೋಕ ಮೇಟಿ, ಸುರೇಶ ಶಿವಣ್ಣನವರ, ಪ್ರಕಾಶ ಪಾಕ್ರೆ ಮೊದಲಾದವರು ಮಾತನಾಡಿದರು.
ಕಬ್ಬು ಬೆಳೆಗಾರರಾದ ಎಸ್.ಕೆ. ಗೌಡ, ಅನ್ವರ ಪುಂಗಿ, ಪುಂಡ್ಲೀಕ ಗೋಡೆಮನಿ, ಕಲಘಟಗಿಯ ರೈತ ಪ್ರಮುಖರಾದ ಆರ್.ಎಸ್. ಪಾಟೀಲ, ಪಸರತ್ ಠಾಕಪ್ಪನವರ, ಹೂವಪ್ಪ ಬಡಿಗೇರ, ಅಳ್ನಾವರದ ಲಿಂಗರಾಜ ಮೂಲಿಮನಿ, ಭರತೇಶ ಪಾಟೀಲ, ಖಾನಾಪುರದ ಶಿವರಾಜ ಬಿಜಾಪುರ ಇದ್ದರು.