ಯು.ಎಸ್. ಪಾಟೀಲ ದಾಂಡೇಲಿ
ದೇಶಾದ್ಯಂತ ಮಾತ್ರವಲ್ಲದೆ, ವಿದೇಶದಲ್ಲೂ ತನ್ನ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಗಳಿಸಿಕೊಂಡಿದ್ದರೂ ದಾಂಡೇಲಿ ಫೆರೋಅಲೈಸ್ ಪ್ರೆವೇಟ್ ಲಿಮಿಟೆಡ್ ಕಂಪನಿಯ ಕಾರ್ಖಾನೆಯು 2001ರಲ್ಲಿ ಅಧಿಕೃತವಾಗಿ ಮುಚ್ಚಿತು.
ಸುಮಾರು 46 ವರ್ಷಗಳ ಕಾಲ ಸಹಸ್ರಾರು ಜನರಿಗೆ ಉದ್ಯೋಗ ಒದಗಿಸಿದ ಈ ಕಂಪನಿಯು ಬಂದ್ ಆಗಲು ಕಾರಣವೇನು?
ಕಚ್ಚಾ ವಸ್ತುವಾದ ಮ್ಯಾಂಗನೀಸ್ ಅದಿರಿನ ಅಲಭ್ಯತೆಯೇ ಇದಕ್ಕೆ ಪ್ರಮುಖ ಕಾರಣವಾಯಿತು. ವಿದ್ಯುತ್ ದರ ಹೆಚ್ಚಳವೂ ಹೊಡೆತ ನೀಡಿತು.
ಕಾರ್ಖಾನೆಯವರು ತಮಗೆ ಬೇಕಾದ ಅದಿರನ್ನು ಸ್ವತಃ ಗಣಿಗಾರಿಕೆ ನಡೆಸುವ ಮೂಲಕ ಪಡೆದುಕೊಳ್ಳುತ್ತಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತಾವೇ ನೇರವಾಗಿ ಗಣಿಯನ್ನು ಗುತ್ತಿಗೆ ಪಡೆದಿದ್ದರು. ವಾರ್ಷಿಕವಾಗಿ ನಿಗದಿಪಡಿಸಲಾದ ಹಣವನ್ನು ಇದಕ್ಕಾಗಿ ಸರ್ಕಾರಕ್ಕೆ ಪಾವತಿಸುತ್ತಿದ್ದರು.
ಅವಶ್ಯವಿರುವ ಕಚ್ಚಾ ವಸ್ತು ಮ್ಯಾಂಗನೀಸ್ ಅದಿರನ್ನು ಪ್ರಮುಖವಾಗಿ ಜೊಯಿಡಾ ತಾಲೂಕಿನ ನಗರಿ, ಉಡಸಾ, ಚಾಪೊಲಿ, ಸುಲಾವಲಿ, ಪನ್ಸೂಲಿ, ಕರಂಜೊಯಿಡಾ, ವಿರ್ನೆಲಿ, ಕಲಂಕರದ್ವುುಂದ್ರೊಲಿ, ಪ್ರಧಾನಿ, ಶಿರೊಲಿ, ಶಣ್ಮುಗ, ಅಮರಗಾಂವ್, ಉಸೊಡಾ, ಜಾವೊಳಿ, ಚಿತ್ರದುರ್ಗ ಜಿಲ್ಲೆಯ ಹುಲಿಕಟ್ಟೆ ಮತ್ತು ದೊಡ್ಡ ಬಯಲದ ಕೆರೆ ಮೊದಲಾದ ಗಣಿ ಪ್ರದೇಶಗಳಿಂದ ಪಡೆದುಕೊಳ್ಳುತ್ತಿದ್ದರು.
ಈ ಅದಿರಿನ ವ್ಯವಹಾರಕ್ಕಾಗಿ ಕಾರ್ಖಾನೆಯವರು ನಾಗರಿ ಮೈನಿಂಗ್ ಕಂಪನಿ ಎಂಬ ತಮ್ಮದೇ ಆದ ಪ್ರತ್ಯೇಕ ಅಂಗ ಸಂಸ್ಥೆ ಕೂಡ ರಚಿಸಿಕೊಂಡಿದ್ದರು.
ಅಗಸ್ಟ್ 14ರ 2001ರಲ್ಲಿ ಮುಚ್ಚಲ್ಪಟ್ಟ ಕಾರ್ಖಾನೆ : ಕಾಲಾ ನಂತರದಲ್ಲಿ ಸರ್ಕಾರವು ಗಣಿಗಾರಿಕೆ ನಿರ್ಬಂಧನೆಯ ಕಾಯ್ದೆಯನ್ನು ಜಾರಿಗೆ ತಂದಿತು. ಅಲ್ಲದೆ, ಮ್ಯಾಂಗನೀಸ್ ಅದಿರು ದೊರೆಯುವ ಲೀಸ್ ಪ್ರದೇಶಗಳನ್ನು ವನ್ಯಜೀವಿ ಅಭಯಾರಣ್ಯ ಪ್ರದೇಶವೆಂದು ರಾಜ್ಯ ಸರ್ಕಾರ ಘೊಷಿಸಿತು. ಈ ಎರಡು ಸಂಗತಿಗಳು ಕಾರ್ಖಾನೆಗೆ ಮರ್ವಘಾತ ನೀಡಿದವು. ಗಣಿಗಾರಿಕೆ ಬಂದ್ ಆಗಿದ್ದರಿಂದ ಕಚ್ಚಾವಸ್ತು ಅದಿರು ದೊರೆಯದೆ ಕಾರ್ಖಾನೆ ನಡೆಸುವುದು ದಿನೇದಿನೆ ಕಠಿಣವಾಯಿತು. ಹೀಗಾಗಿ, ಮ್ಯಾಂಗನೀಸ್ ಗಣಿಗಳನ್ನು ನೋಡಿಕೊಳ್ಳಲು ಸ್ಥಾಪಿಸಿದ ನಾಗರಿ ಮೈನಿಂಗ್ ಕಂಪನಿಯನ್ನೇ 1997ರಲ್ಲಿ ಮುಚ್ಚಲಾಯಿತು.
ಇದಲ್ಲದೆ, ಕಾರ್ಖಾನೆಗೆ ಪೂರೈಸುವ ವಿದ್ಯುತ್ಗೂ ಅತಿ ಹೆಚ್ಚಿನ ದರವನ್ನು ಸರ್ಕಾರ ನಿಗದಿಪಡಿಸಿತು. ಇದು ಕೂಡ ಕಾರ್ಖಾನೆಯ ಗಾಯದ ಮೇಲೆ ಬರೆ ಎಳೆದಂತಾಯಿತು. ಹೀಗಾಗಿ, 2001ರ ಅಗಸ್ಟ್ 15ರ ದಿನಾಚರಣೆಯ ಮುನ್ನಾದಿನ, ಅಂದರೆ ಅಗಸ್ಟ್ 14ರ ಸಂಜೆ ಆಡಳಿತ ಮಂಡಳಿಯು ಕಾರ್ಖಾನೆ ಮುಚ್ಚುವ ಘೊಷಣೆಯನ್ನು ಪ್ರಕಟಿಸಿತು. ಇದರಿಂದಾಗಿ, ಕಾರ್ಖಾನೆಯಲ್ಲಿ ಮತ್ತು ಮೈನಿಂಗ್ ಕಂಪನಿಯಲ್ಲಿ ದುಡಿಯುತ್ತಿದ್ದ 3000ಕ್ಕೂ ಹೆಚ್ಚು ನೇರ ಕಾರ್ವಿುಕರು ಮತ್ತು ಕಾರ್ಖಾನೆಯ ಅವಲಂಬಿತ ಸುಮಾರು 2000 ಕೆಲಸಗಾರರು 2001ರ ಸ್ವಾತಂತ್ರ್ಯ ದಿನಾಚರಣೆ ಮುನ್ನಾದಿನ ಉದ್ಯೋಗ ಕಳೆದುಕೊಂಡರು. ಕಾರ್ವಿುಕರ ಕುಟಂಬಸ್ಥರು ಸಂಕಷ್ಟಕ್ಕೊಳಗಾಗಿ ಕಣ್ಣೀರು ಸುರಿಸಿದರು. ಕಾರ್ಖಾನೆಯ ಬಹುತೇಕ ಸಿಬ್ಬಂದಿ ಹಾಗೂ ಕಾರ್ವಿುಕರು ಕ್ರಮೇಣವಾಗಿ ದಾಂಡೇಲಿ ತೊರೆದು ಹೊಟ್ಟೆ ಪಾಡಿಗಾಗಿ ಪರ ಊರಿಗೆ ತೆರಳಿದರು.
ಪ್ರೇಕ್ಷಣೀಯ ಸ್ಥಳವಾದ ಗಣಿ ಪ್ರದೇಶ: ಮ್ಯಾಂಗನೀಸ್ ಅದಿರಿಗಾಗಿ ಕಾರ್ಖಾನೆಯವರು ಗಣಿಗಾರಿಕೆ ಕೈಗೊಂಡ ಅನೇಕ ಪ್ರದೇಶಗಳು ಈಗ ಪ್ರೇಕ್ಷಣಿಯ ಸ್ಥಳಗಳಾಗಿವೆ. ಕೆಂಪು ಮಣ್ಣಿನ ಈ ಗಣಿಗಳು ಬಂದ್ ಆಗಿ ಈಗ ಎರಡು ದಶಕಗಳು ಕಳೆದಿವೆ. ಈ ಪ್ರದೇಶದಲ್ಲಿ ಸಾಕಷ್ಟು ಅರಣ್ಯ ಬೆಳೆದಿದೆ. ಇಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆ ರಮಣೀಯವಾಗಿದೆ. ಹೀಗಾಗಿ, ಈ ಪ್ರದೇಶಗಳು ಜನರನ್ನು ತಮ್ಮತ್ತ ಸೆಳೆಯುತ್ತಿವೆ.