ಜಿಲ್ಲೆ

ಕಾರ್ಖಾನೆ ಪುನಾರಂಭವೋ, ಜಾಗ ತೆರವೋ?

ಯು.ಎಸ್. ಪಾಟೀಲ ದಾಂಡೇಲಿ

ದಾಂಡೇಲಿ ಫೆರೋಅಲೈಸ್ ಪ್ರೖೆವೇಟ್ ಲಿಮಿಟೆಡ್ ಕಂಪನಿಯ ಕಾರ್ಖಾನೆ ಜಾಗವು ಅರಣ್ಯ ಇಲಾಖೆಯಿಂದ ಗುತ್ತಿಗೆ ಪಡೆದುದಾಗಿದೆ. ಅವಧಿ ಮುಗಿದರೂ ಗುತ್ತಿಗೆಯನ್ನು ನವೀಕರಣ ಮಾಡಿಲ್ಲ. ಕಾರ್ಖಾನೆಯೂ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಈ ಜಾಗ ಕಾರ್ಖಾನೆಯ ಆಡಳಿತ ಮಂಡಳಿ ಬಳಿಯೇ ಉಳಿದುಕೊಳ್ಳಬೇಕೋ ಇಲ್ಲವೇ ಅರಣ್ಯ ಇಲಾಖೆಗೆ ತೆಕ್ಕೆಗೆ ಮರಳಬೇಕೋ ಎಂಬ ಪ್ರಶ್ನೆ ಉದ್ಭವಿಸಿದೆ.

ಕಾರ್ಖಾನೆಗೆ ನೀಡಿದ ಈ ಜಾಗೆಯ ಲೀಸನ್ನು ಪ್ರತಿ 30 ವರ್ಷಕ್ಕೂಮ್ಮೆ ಲೀಸ್ ನವೀಕರಣಗೊಳಿಸಿ ಕಾರ್ಖಾನೆಯಲ್ಲಿ ಉತ್ಪಾದನೆ ನಡೆಸಬೇಕೆಂಬ ಷರತ್ತು ವಿಧಿಸಲಾಗಿದೆ. ಆದರೆ, ಲೀಸ್ ಅವಧಿ 1986ರಲ್ಲಿಯೇ ಮುಗಿದರೂ ನವೀಕರಣದ ಬಗ್ಗೆ ಸೂಕ್ತ ದಾಖಲೆಗಳೊಂದಿಗೆೆ ಪ್ರಸ್ತಾವನೆಯನ್ನು ನೀಡಲಿಲ್ಲ ಎಂಬುದು ಅರಣ್ಯ ಇಲಾಖೆಯ ವಾದ.

ಲೀಸ್​ನ ನಿಯಾಮವಳಿಗಳಂತೆ ನವೀಕರಣ ಮಾಡಿಕೊಂಡಿರುವುದಿಲ್ಲ. 34 ವರ್ಷ ಕಾನೂನುಬಾಹಿರವಾಗಿ ಜಾಗೆಯನ್ನು ಉಪಯೋಗಿಸಲಾಗಿದೆ. ಪರ್ಯಾಯವಾಗಿ ಕಚ್ಚಾ ಸಾಮಗ್ರಿಗಳನ್ನು ಪೂರೈಸಿಕೊಳ್ಳುವ ವರದಿಯನ್ನು ಅರಣ್ಯ ಇಲಾಖೆಯವರ ಕೋರಿಕೆಯಂತೆ ಸಲ್ಲಿಸಲ್ಲಿಲ್ಲ. ಹೀಗಾಗಿ, ಕಾಯ್ದೆ ಪ್ರಕಾರ ಜಾಗೆಯನ್ನು ತಮಗೆ ಮರಳಿ ನೀಡಬೇಕೆಂದು ಾರ್ಖಾನೆಯವರಿಗೆ ಅರಣ್ಯ ಇಲಾಖೆಯವರು ನೋಟಿಸ್ ಜಾರಿಗೊಳಿಸಲು ಆರಂಭಿಸಿದರು.

ಹಳಿಯಾಳದ ತಹಸೀಲ್ದಾರರು ಕೂಡ ಇದೇ ಕಾರಣ ನೀಡಿ, ಜಾಗೆಯು ಅರಣ್ಯ ಇಲಾಖೆಯವರಿಗೆ ಸೇರಿದೆ ಎಂದು ನೋಟಿಸ್​ಗಳನ್ನು ಕಾರ್ಖಾನೆಯ ಆಡಳಿತ ಮಂಡಳಿಗೆ ನೀಡಿದ್ದಾರೆ.

ಕಾರ್ಖಾನೆಯವರ ವಾದ: ಕಾರಣಾಂತರದಿಂದ ಮುಚ್ಚಲ್ಪಟ್ಟರೂ ಮತ್ತೆ ಉತ್ಪಾದನೆ ಆರಂಭಿಸಲು ಅವಕಾಶವಿದೆ. ಹೀಗಾಗಿ, ಕಾರ್ಖಾನೆ ಹೆಸರಿಗೆ ಲೀಸ್ ನವೀಕರಣಗೊಳಿಸಿ ನೀಡಬೇಕೆಂದು ತಾಲೂಕು ಹಾಗೂ ಜಿಲ್ಲಾಧಿಕಾರಿಗಳಿಗೆ ಕೋರಿಕೆ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೂ ಈ ನಿಟ್ಟಿನಲ್ಲಿ ಮನವಿ ಸಲ್ಲಿಸಿದ್ದಾರೆ.

ಕಾರ್ಖಾನೆಗೆ ಅಂತಿಮ ನೋಟಿಸ್: 1996ರಿಂದ ಲೀಸ್ ಅವಧಿ ನವೀಕರಣಗೊಳಿಸಿಲ್ಲ. ಮೂಲ ಉದ್ದೇಶಕ್ಕೆ ಕಾರ್ಖಾನೆಯ ಜಾಗ ಬಳಸದೆ ಕಾನೂನುಬಾಹಿರವಾಗಿ ಉಪಯೋಗಿಸುತ್ತಿದ್ದಾರೆಂದು ಅರಣ್ಯ ಇಲಾಖೆಯವರು ಆರೋಪಿಸಿದ್ದಾರೆ. ಸರ್ವೆ ನಂ 6ಬ ದ 196 ಎಕರೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಿ ಹೊರಹೋಗಬೇಕು. ಅಲ್ಲದೆ, ಈ ಪ್ರದೇಶವನ್ನು ತೆರವು ಮಾಡಿ, ಅರಣ್ಯ ಇಲಾಖೆಯ ವಶಕ್ಕೆ ನೀಡಬೇಕು ಎಂದು ದಾಂಡೇಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಕಾರ್ಖಾನೆಯ ಆಡಳಿತ ಮಂಡಳಿಗೆ ಮಾರ್ಚ್ 18ರಂದು 2020ರಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ.

196 ಎಕರೆಯಷ್ಟು ವಿಶಾಲ ಜಾಗೆಯಲ್ಲಿನ ಈ ಕಾರ್ಖಾನೆ ಪುನಾರಂಭವಾವುದೋ? ಇಲ್ಲವೇ ಅರಣ್ಯ ಇಲಾಖೆ ಈ ಜಾಗೆಯನ್ನು ಮರಳಿ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದೋ? ಅಥವಾ ನಗರಸಭೆ ಈ ಜಾಗೆಯನ್ನು ತನ್ನ ವಶಕ್ಕೆ ಪಡೆದು ಇನ್ನೇನಾದರೂ ಯೋಜನೆಗೆ ಬಳಕೆ ಮಾಡಿಕೊಳ್ಳುವುದೋ ಎಂಬ ಪ್ರಶ್ನೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತರ ದೊರೆಯಲಿದೆ. ಕಾರ್ಖಾನೆಯ 196 ಎಕರೆ ಜಾಗೆಯನ್ನು ಖಾಲಿ ಮಾಡಬೇಕು ಎಂದು ಕಾರ್ಖಾನೆಯ ಆಡಳಿತ ಮಂಡಳಿಗೆ ನೋಟಿಸ್ ಅನ್ನು 2020ರ ಮಾರ್ಚ್ 18ರಂದು ಜಾರಿ ಮಾಡಲಾಗಿದೆ. ಈ ಕುರಿತು ಅಂತಿಮ ತೀರ್ಮಾನ ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳ ಹಂತದಲ್ಲಿ ಹೊರ ಬೀಳಬೇಕಾಗಿದೆ. | ಎಸ್.ವಿ ನಾಯ್ಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ದಾಂಡೇಲಿ ಉಪ ವಿಭಾಗ, ದಾಂಡೇಲಿ

ದಾಂಡೇಲಿ ಜನತೆಗೆ ಬೇಕಾಗಿದ್ದು ಏನು?: ಒಂದು ಕಾಲದಲ್ಲಿ ದೇಶದ ಹಾಗೂ ರಾಜ್ಯದ ಅದರಲ್ಲೂ ಉ.ಕ. ಜಿಲ್ಲೆಯ ಪ್ರತಿಷ್ಠಿತ ಕೈಗಾರಿಕಾ ನಗರವಾಗಿದ್ದ ದಾಂಡೇಲಿ ಈಗ ಕಾರ್ಖಾನೆಗಳು ಮುಚ್ಚಿದ ನಗರವಾಗಿದೆ. ಬಂದ್ ಆಗಿರುವ ಇಲ್ಲಿನ ಡಿಎಸ್​ಎಫ್​ಎ, ಐಪಿಎಂ, ಶ್ರೇಯಸ್ ಪೇಪರ್ ಮಿಲ್, ಐಪಿಸಿ, ಸಾ- ಮಿಲ್ (ಸರ್ಕಾರಿ ಸೌಮ್ಯದ) ಕಾರ್ಖಾನೆಗಳು ಪುನಾರಂಭವಾಗಬೇಕು ಎಂಬುದು ಜನರ ಬಯಕೆಯಾಗಿದೆ.