ಕಾರಕಹಳ್ಳಿ ಶ್ರೀ ಬಸವೇಶ್ವರ ದೇವಾಲಯದ ಪವಾಡ ಬಸವಪ್ಪಗೆ ಅಂತಿಮ ನಮನ. 
ಜಿಲ್ಲೆ

ಕಾರ್ಕಹಳ್ಳಿ ಶ್ರೀಬಸವೇಶ್ವರ ಕ್ಷೇತ್ರದ ಪವಾಡ ಬಸವ ಸಾವು

ಕೆ.ಎಂ.ದೊಡ್ಡಿ: ಸೊಂಟ ಮುರಿದು ಚಿಕಿತ್ಸೆ ಪಡೆಯುತ್ತಿದ್ದ ಸಮೀಪದ ಕಾರ್ಕಹಳ್ಳಿ ಶ್ರೀ ಬಸವೇಶ್ವರ ಕ್ಷೇತ್ರದ ಪವಾಡ ಬಸವ ಗುರುವಾರ ಬೆಳಗ್ಗೆ ಮೃತಪಟ್ಟಿತು.
ಮೂರು ತಿಂಗಳ ಹಿಂದೆ ಭಕ್ತರೊಬ್ಬರ ಮನೆಗೆ ಪೂಜೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಲಗೂರು ರಸ್ತೆಯಲ್ಲಿ ವ್ಯಾನ್ ಹಳ್ಳಕ್ಕೆ ಬಿದ್ದು ಬಸವಪ್ಪನ ಸೊಂಟಕ್ಕೆ ತೀವ್ರ ಪೆಟ್ಟು ಬಿದ್ದು ಬೆನ್ನಿನ ಮೂಳೆ ಮುರಿದಿತ್ತು. ಹಾಸನದ ಪಶು ವೈದ್ಯಕೀಯ ಆಸ್ಪತ್ರೆಗೂ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚೇತರಿಕೆ ಕಾಣದೆ ಸಾವಿಗೀಡಾಗಿದೆ.
ಬಸವಪ್ಪನನ್ನು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನವಾಗದೆ ವಾಪಸ್ ದೇವಾಲಯದ ಆವರಣದಲ್ಲಿರುವ ಬಸವಪ್ಪನ ಮನೆಗೆ ಕರೆತಂದು ಚಿಕಿತ್ಸೆ ಮುಂದುರಿಸಲಾಗಿತ್ತು. ಆದರೆ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುತ್ತಿದ್ದ ಬಸವಪ್ಪ ತೀವ್ರವಾಗಿ ಅಸ್ವಸ್ಥಗೊಂಡು ಗುರುವಾರ ಬೆಳಗ್ಗೆ ಮೃತಪಟ್ಟಿತು. ಅಂತಿಮ ಯಾತ್ರೆ ನಡೆಸಲಾಯಿತು. ಗ್ರಾಮದ ಪ್ರತಿ ಮನೆಗಳಲ್ಲೂ ಬಸವಪ್ಪನಿಗೆ ಆರತಿ ನೀಡಿ ಅಂತಿಮ ಪೂಜೆ ಸಲ್ಲಿಸಲಾಯಿತು.
ಕೆ.ಆರ್.ಪೇಟೆ ಬಳಿಯ ಗ್ರಾಮವೊಂದರಿಂದ ಬಸವನನ್ನು ತಂದು ಬಿಡಲಾಗಿತ್ತು. ಬಸವೇಶ್ವರ ದೇವಾಲಯದ ಎಲ್ಲ ಪೂಜಾ ಕಾರ್ಯಗಳಲ್ಲಿಯೂ ಪಾಲ್ಗೊಳ್ಳುತ್ತಿತ್ತು. ಮಾರ್ಚ್ 3ರಿಂದ 8 ರವರೆಗೆ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಿಗದಿಯಾಗಿದ್ದು ಹಬ್ಬಕ್ಕೆ ಮುನ್ನವೇ ಬಸವನ ನಿಧನ ಭಕ್ತರಲ್ಲಿ ದುಃಖ ತರಿಸಿದೆ.
ಬಸವನ ಕಳೇಬರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮಸ್ಥರು ಅಂತಿಮ ಪೂಜೆ ಸಲ್ಲಿಸಿದರು. ದೇವೇಗೌಡನದೊಡ್ಡಿ, ಕಾರ್ಕಹಳ್ಳಿ ಗ್ರಾಮದ ದೇವರ ಕುಲದವರು ದೇವಾಲಯದ ಹಿಂಭಾಗದಲ್ಲಿ ಬಸವಪ್ಪನ ಅಂತ್ಯಸಂಸ್ಕಾರವನ್ನು ವಿಧಿವಿಧಾನಗಳೊಂದಿಗೆ ಸಂಜೆ ನೆರವೇರಿಸಿದರು.
ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರ ಮನೆ ದೇವರಾದ ಶ್ರೀ ಕಾರಕಹಳ್ಳಿ ಬಸವೇಶ್ವರ ಬಸವಪ್ಪ ಹಲವು ಪವಾಡಗಳಿಗೆ ಸಾಕ್ಷಿಯಾಗಿತ್ತು. ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿತ್ತು. ಶಾಸಕ ಡಿ.ಸಿ.ತಮ್ಮಣ್ಣ, ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮನ್ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ, ಮಾಜಿ ನಿರ್ದೇಶಕ ಕಾರಕಹಳ್ಳಿ ಬಸವೇಗೌಡ, ಜಿ.ಪಂ. ಮಾಜಿ ಸದಸ್ಯ ಎ.ಎಸ್.ರಾಜೀವ್, ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಸದಸ್ಯ ಕದಲೂರು ರವಿ ಇತರರು ಬಸವಪ್ಪನ ಅಂತಿಮ ದರ್ಶನ ಪಡೆದರು.