ಅಂಕೋಲಾ: ಕಾರ್ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಚಾಲಕ ಸೇರಿ ಮೂವರು ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ರಾ.ಹೆ. 63ರ ಮಾಸ್ತಿಕಟ್ಟೆ ಬಳಿ ಸಂಭವಿಸಿದೆ.
ಧಾರವಾಡದ ಕೃಷಿ ವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ರೇಖಾ ಜಿ. ಕೊಕಟನೂರು (30) ಮೃತಪಟ್ಟವರು. ವಿವಿ ಕುಲಪತಿ ಎಂ.ಬಿ. ಚೆಟ್ಟಿ ಅವರ ಆಪ್ತ ಕಾರ್ಯದರ್ಶಿ ಎಂ.ಎ. ಮುಲ್ಲಾ, ಕಂಪ್ಯೂ ಟರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಳ್ವಪ್ಪ ಮೇಸ್ತ್ರಿ ಮತ್ತು ಮೇಘನಾ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಗಾಗಿ ಕಾರವಾರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಕಾರ್ನಲ್ಲಿ ಅಂಕೋಲಾ ಕಡೆಯಿಂದ ಧಾರವಾಡಕ್ಕೆ ತೆರಳುತ್ತಿದ್ದ ವೇಳೆ ಎದುರಿಗೆ ಬರುತ್ತಿದ್ದ ಬಸ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸಿಪಿಐ ಕೃಷ್ಣಾನಂದ ನಾಯಕ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡರು. ಹೆದ್ದಾರಿ ಗಸ್ತು ವಾಹದನ ಎಎಸ್ಐ ರಾಮನಾಥ ಗುಡೇಂಗಡಿ, ಚಾಲಕ ಸಂತೋಷ ಪಿ.ನಾಯ್ಕ ಗಾಯಾಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು.
***