ಜಿಲ್ಲೆ

ಕಾರುಗಳು ಮುಖಾಮುಖಿ ಇಬ್ಬರು ಸಾವು

ಬಾಗಲಕೋಟೆ: ಮಹಾರಾಷ್ಟç ಮೂಲದ ಕಾರು ಹಾಗೂ ಬಾದಾಮಿ ಕಡೆಯಿಂದ ಬರುತ್ತಿದ್ದ ಕಾರು ಮುಖಾಮುಖಿಯಾದ ಪರಿಣಾಮ ಕಾರಿನಲ್ಲಿ ಇದ್ದ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವ ಘಟನೆ ಗುರುವಾರ ಬೆಳಗ್ಗೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಬಳಿ ನಡೆದಿದೆ.

ರಾಯಚೂರ-ಬೆಳಗಾವಿ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದ್ದು, ಮೃತರನ್ನು ಬಾದಾಮಿ ತಾಲೂಕಿನ ನಿಲವಗಿ ಗ್ರಾಮದ ಗಂಗಮ್ಮ ವಿರೇಶ ಅಂಗಡಿ (೫೦) ಹಾಗೂ ಅವರ ಪುತ್ರ ಸಂದೇಶ ಅಂಗಡಿ (೧೯) ಎಂದು ಗುರುತಿಸಲಾಗಿದೆ. ಹಾಗೆ ಇದೇ ಕಾರಿನಲ್ಲಿ ಇದ್ದ ವಿರೇಶ ಅಂಗಡಿ(೫೬) ಹಾಗೂ ಸತೀಶ ಅಂಗಡಿ(೨೮) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಹಾರಾಷ್ಟç ಮೂಲದ ಕಾರು ಚಲಾಯಿಸುತ್ತಿದ್ದ ಪುಣೆ ಜಿಲ್ಲೆಯ ಪ್ರಜ್ಯೋತ್ ವಾಗಮೋಡೆ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ರಕ್ಕಸಗಿಯಿಂದ ಹುನಗುಂದ ಕಡೆಗೆ ಅಂಗಡಿ ಕುಟುಂಬದವರು ಇದ್ದ ಕಾರು ಹೊರಟಿತ್ತು. ಅತ್ತ ಹುನಗುಂದ ಕಡೆಯಿಂದ ಅಮೀನಗಡ ಕಡೆಗೆ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸತೀಶ ಅಂಗಡಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಅಪಘಾತದ ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇನ್ನು ಅಪಘಾತದ ರಭಸಕ್ಕೆ ಎರಡು ಕಾರುಗಳು ನಜ್ಜುನುಜ್ಜಾಗಿವೆ.