ನೆಲಮಂಗಲ: ಕಾರುಗಳ ನಡುವಿನ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲೂಕಿನ ಯಂಟಗಾನಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಯಲ್ಲಿ ದುರಂತ ಸಂಭವಿಸಿದೆ. ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕು ಸವೇನಹಳ್ಳಿ ನಿವಾಸಿ ಶಿವಕುಮಾರ್ (24), ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ನಿವಾಸಿ ಕಿರಣ್ (25), ಬೆಂಗಳೂರು ಹೆಬ್ಬಾಳ ಬಳಿಯ ಕೆಂಪಾಪುರ ಅಗ್ರಹಾರ ನಿವಾಸಿ ಕಾವೇರಮ್ಮ (80) ಮೃತಪಟ್ಟಿದ್ದಾರೆ. ಕಾವೇರಮ್ಮ ಸೊಸೆ ರಶ್ಮಿ (51) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಿರಿಸಾವೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಮಾರುತಿ ಇಕೋ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಸೈರ್ ಕಾರಿನಲ್ಲಿದ್ದ ಶಿವಕುಮಾರ್, ಕಿರಣ್ ಹಾಗೂ ಇಕೋ ಕಾರಿನಲ್ಲಿದ್ದ ಕಾವೇರಮ್ಮ ಸ್ಥಳದಲ್ಲೇ ಮೃತಪಟ್ಟರೆ, ಕಾವೇರಮ್ಮ ಸೊಸೆ ರಶ್ಮಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ರಶ್ಮಿಪತಿ ರಾಮಕೃಷ್ಣ (56), ಪುತ್ರಿ ನಿಶಾ (21) ರಾಮಕೃಷ್ಣ ಸ್ನೇಹಿತ ನಾಗರಾಜು (45) ಹಾಗೂ ಸ್ವಿಫ್ಟ್ ಕಾರು ಚಾಲಕ ಸಚಿನ್ (25) ಗಂಭೀರ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವಾಹಕ್ಕೆ ತೆರಳುತ್ತಿದ್ದವರು ಮಸಣಕ್ಕೆ: ಹೆಬ್ಬಾಳದ ಕೆಂಪಾಪುರ ಅಗ್ರಹಾರ ನಿವಾಸಿ ರಾಮಕೃಷ್ಣ, ತಾಯಿ ಕಾವೇರಮ್ಮ, ಪತ್ನಿ ರಶ್ಮಿ, ಪುತ್ರಿ ನಿಶಾ ಸ್ನೇಹಿತ ನಾಗರಾಜು ಕೊಡಗಿನಲ್ಲಿ ಸಂಬಂಧಿಕರ ವಿವಾಹಕ್ಕೆ ತೆರಳುತ್ತಿದ್ದರು. ಮಾರುತಿ ಸ್ವಿಪ್ಟ್ ಕಾರಿನಲ್ಲಿದ್ದ ಶಿವಕುಮಾರ್ ಹಾಗೂ ಕಿರಣ್ ಬೆಂಗಳೂರಿನ ಕೆ.ಆರ್.ಪುರಂ ಮೂಲದವರಾಗಿದ್ದು, ಹಿರಿಸಾವೆಯಿಂದ ಬೆಂಗಳೂರಿನ ಕಡೆಗೆ ಹೊರಟಿದ್ದರು. ಗ್ರಾಮಾಂತರ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಸಜೀತ್, ಡಿವೈಎಸ್‌ಪಿ ಬಿ.ಎಸ್.ಮೋಹನ್‌ಕುಮಾರ್, ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಎಸ್.ಆರ್.ವೀರೇಂದ್ರ ಪ್ರಸಾದ್, ಸಬ್‌ಇನ್ಸ್‌ಪೆಕ್ಟರ್ ಮೋಹನ್‌ಕುಮಾರ್ ಸ್ಥಳ ಪರಿಶೀಲನೆ ನಡೆಸಿದರು.
ಟ್ರಾಫಿಕ್ ಜಾಮ್: ಅಪಘಾತದ ಹಿನ್ನೆಲೆಯಲ್ಲಿ ಮಂಗಳೂರು ಮಾರ್ಗದ ರಾಷ್ಟ್ರಿಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ನಿರ್ಮಾಣವಾಗಿತ್ತು. ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ನೆರವಿನಿಂದ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು.