- ಶ್ರೀರಂಗಪಟ್ಟಣ: ತಾಲೂಕಿನ ಗರುಡನ ಉಕ್ಕಡದ ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳ ನಡುವೆ ಉಂಟಾಗಿದ್ದ ಮುಖಾಮುಖಿ ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.
ಮೈಸೂರಿನ ರಾಮಕೃಷ್ಣನಗರದ ಎಚ್ ಬ್ಲಾಕ್ ನಿವಾಸಿ ಮುರುಳಿಧರ ಎಂಬುವರ ಪುತ್ರಿ ಪೂಜಾ(32) ಮೃತ ದುರ್ದೈವಿ.
ಯುವತಿ ಪೂಜಾ ಕಾರಿನಲ್ಲಿ ಶುಕ್ರವಾರ ತಮ್ಮ ಸಂಬಂಧಿಕರ ಶುಭಕಾರ್ಯದಲ್ಲಿ ಭಾಗಿಯಾಗಲು ಮೈಸೂರಿನಿಂದ ಬೆಂಗಳೂರಿಗೆ ಪಾಲಕರ ಜತೆ ಹೊರಟಿದ್ದರು. ಈ ವೇಳೆ ಮಂಡ್ಯದ ಸ್ವರ್ಣಸ್ವಂದ್ರ ನಿವಾಸಿ ನಿವೃತ್ತ ಯೋಧ ಶಿವಕುಮಾರ್ ಎಂಬುವರು ತಮ್ಮ ಕಾರಿನಲ್ಲಿ ಅತೀ ವೇಗದಲ್ಲಿ ವಾಹನ ಚಲಾಯಿಸಿದ್ದು, ರಸ್ತೆಯಲ್ಲಿ ಕಾರು ನಿಯಂತ್ರಣಕ್ಕೆ ಬಾರದೆ ಏಕಾಏಕಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಹಾರಿ ಮತ್ತೊಂದು ಬದಿಯಲ್ಲಿ ಎದುರಿಗೆ ಬರುತ್ತಿದ್ದ ಪೂಜಾ ಅವರಿದ್ದ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದೂ, ಗಾಯಗೊಂಡಿದ್ದ ಐವರನ್ನು ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇವರ ಪೈಕಿ ತಲೆ ಹಾಗೂ ಬೆನ್ನುಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಪೂಜಾ ಮೃತಪಟ್ಟಿದ್ದಾಳೆ.