ಜಿಲ್ಲೆ

ಕಾರು ದುರಂತ ಸ್ಥಳಕ್ಕೆ ಎಡಿಜಿಪಿ ಅಲೋಕ್ ಭೇಟಿ

ಶ್ರೀರಂಗಪಟ್ಟಣ: ತಾಲೂಕಿನ ಗಾಮನಹಳ್ಳಿ ಗ್ರಾಮ ಹೊರವಲಯದ ತುರುಗನೂರು ಬ್ರಾಂಚ್‌ನ ವಿಶ್ವೇಶ್ವರಯ್ಯ ನಾಲೆ ರಸ್ತೆಯಲ್ಲಿ ನಡೆದ ಕಾರು ದುರಂತದ ಸ್ಥಳಕ್ಕೆ ಎಡಿಜಿಪಿ ಅಲೋಕ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.


ತಾಲೂಕಿನ ಗಾಮನಹಳ್ಳಿ ಗ್ರಾಮ ವ್ಯಾಪ್ತಿಯ ಈ ವಿಶ್ವೇಶ್ವರಯ್ಯ ನಾಲೆ ಏರಿ ರಸ್ತೆಯ ತಿರುವಿನಲ್ಲಿ ಕಳೆದ ತಿಂಗಳು ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ತುಂಬಿದ ನೀರಿನ ನಾಲೆಯೊಳಗೆ ಪಲ್ಟಿಯಾಗಿ ಸ್ಥಳದಲ್ಲೇ ಒಬ್ಬ ಯುವತಿ ಸೇರಿದಂತೆ ಮೂವರು ಮಹಿಳೆಯರು ಮೃತಪಟ್ಟಿದ್ದರು. ಇದೀಗ ಅಪಘಾತ ನಡೆದ ಕುರಿತು ಸ್ಥಳ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾಹಿತಿ ಕಲೆ ಹಾಕಿದ ಎಡಿಜಿಪಿ ಅಲೋಕ್ ಕುಮಾರ್ ಅವರು, ತಾಲೂಕು ಸೇರಿದಂತೆ ಜಿಲ್ಲೆ ವ್ಯಾಪ್ತಿಯಲ್ಲಿನ ಇಂತಹ ನಾಲೆ ಮತ್ತು ಕೆರೆ ಏರಿಯ ರಸ್ತೆಗಳಲ್ಲಿನ ಬ್ಲಾಕ್ ಸ್ಪಾಟ್‌ಗಳು ಗುರುತಿಸಿ ರಕ್ಷಣಾ ತಡೆಗೋಡೆಗಳ ನಿರ್ಮಾಣ, ಕಿರಿದಾದ ರಸ್ತೆಗಳು ಮತ್ತು ವೇಗ ನಿಯಂತ್ರಣ ಅನುಸರಿಸುವ ಕುರಿತು ವಾಹನ ಸವಾರರಿಗೆ ಸೂಚನಾ ಫಲಕಗಳನ್ನು ಅಳವಡಿಸಿ ಜಾಗೃತಿ ನೀಡುವ ಬಗ್ಗೆ ನಿರ್ದೇಶನ ನೀಡಿದರು.


ಜತೆಗೆ ಇತ್ತೀಚೆಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ದರೋಡೆ ಪ್ರಕರಣಗಳು ಸೇರಿದಂತೆ, ಪುಂಡ ಯುವಕರ ಬೈಕ್ ವ್ಹೀಲಿಂಗ್ ಹಾಗೂ ಇತರ ಅಪರಾಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಲೋಕ್ ಕುಮಾರ್, ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಸ್ತು ನಡೆಸಿ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕಠಿಣವಾಗಿ ಜಾರಿಗೊಳಿಸಿ ಕ್ರೈಂ ಪ್ರಕರಣಗಳಿಗೆ ಕಡಿವಾಣ ಹಾಕಿ ನಿಯಂತ್ರಣಕ್ಕೆ ತಾಕೀತು ಮಾಡಿದ್ದಾರೆ.


ಡಿಐಜಿ ಬೋರಲಿಂಗಯ್ಯ, ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ಎನ್.ಯತೀಶ್,ಅಪರ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಮುರುಳಿ, ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಎಂ.ಪುನೀತ್, ಪಿಎಸ್‌ಐ ಬ್ಯಾಳಿ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.