ಔರಾದ್-ಬೀದರ್ ಮಾರ್ಗದ ಜೀರ್ಗಾ(ಬಿ) ಬಳಿ ಮಂಗಳವಾರ ಬೆಳಗ್ಗೆ ಕಾರು ಡಿಕ್ಕಿಯಾಗಿ ವಿದ್ಯಾರ್ಥಿ ಗಾಯಗೊಂಡಿದ್ದನ್ನು ಖಂಡಿಸಿ ಗ್ರಾಮಸ್ಥರು ನಡೆಸಿದ ರಸ್ತೆ ತಡೆ ಸ್ಥಳಕ್ಕೆ ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್‌ಐ ನಂದಕುಮಾರ ಮುಳೆ ಭೇಟಿ ನೀಡಿ ಚರ್ಚಿಸಿದರು. 
ಜಿಲ್ಲೆ

ಕಾರು ಡಿಕ್ಕಿಯಾಗಿ ವಿದ್ಯಾರ್ಥಿ ಸ್ಥಿತಿ ಗಂಭೀರ

ಔರಾದ್: ಜೀರ್ಗಾ(ಬಿ) ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾನೆ.

ಜೀರ್ಗಾ(ಬಿ)ದ ವಿಕಾಸ ಸೋಪಾನ (೧೪) ಸ್ಥಿತಿ ಚಿಂತಾಜನಕವಾಗಿದ್ದು, ಬೀದರ್‌ನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದಾನೆ.

ಔರಾದ್‌ನಿಂದ ವೇಗವಾಗಿ ಬರುತ್ತಿದ್ದ ರಾಯಚೂರು ಜಿಲ್ಲೆ ಹಟ್ಟಿ ಮೂಲದ ಕಾರು ಹೊಡೆದ ಡಿಕ್ಕಿಯ ರಭಸಕ್ಕೆ ವಿಕಾಸ ೧೦ ಅಡಿ ಹಾರಿ ಬಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.

ಘಟನೆ ಖಂಡಿಸಿ ರಸ್ತೆ ಸಂಚಾರ ತಡೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಈ ಮಾರ್ಗದಲ್ಲಿ ರಸ್ತೆ ನಿತ್ಯ ಅಪಘಾತ ಸಂಭವಿಸುತ್ತಿದ್ದರೂ ಸಂಬಂಧಿತರು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆ ಪಡೆದ ಆರ್‌ಎಂಎನ್ ಕಂಪನಿ ಅಸಮರ್ಪಕ ರೀತಿಯಲ್ಲಿ ರಸ್ತೆ ಕಾಮಗಾರಿ ಮಾಡಿದೆ. ಅಪಘಾತಕ್ಕೀಡಾದ ವಿದ್ಯಾರ್ಥಿ ಆಸ್ಪತ್ರೆ ವೆಚ್ಚ ಕಂಪನಿ ಭರಿಸಬೇಕು. ಹೈವೇಯಲ್ಲಿ ಹಂಪ್ಸ್ ಹಾಕಿ ಪಾದಚಾರಿ ರಸ್ತೆ (ಸಿವಿಲ್ ರೋಡ್) ನಿರ್ಮಿಸಿ ಬ್ಯಾರಿಕೇಡ್ ಅಳವಡಿಸಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್‌ಐ ನಂದಕುಮಾರ ಮುಳೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಸ್ಥಿತಿ ತಿಳಿಗೊಳಿಸಿದರು.

ರಾಜಕುಮಾರ ಶಿಂಧೆ, ಶಿವಕುಮಾರ, ಅಭಿಷೇಕ, ರವಿ, ಶಿವಾನಂದ ಕೋಟೆ, ಸಿದ್ಧಾರ್ಥ ದೊಡ್ಡೆ, ನಾಗಪ್ಪ, ಗೌತಮ, ದಿಗಂಬರ್, ಸಿದ್ದಪ್ಪ ಮಡಕೆ, ಲಕ್ಷ್ಮೀ ಫುಲೆ, ಚಂದ್ರಮ್ಮ, ಮಹಾದೇವಿ, ಸಕುಬಾಯಿ, ಕಾಂತಮ್ಮ, ಗಣಪತಿ ವಾಸುದೇವ, ಧನರಾಜ ಮುಸ್ತಾಪುರೆ, ಸತೀಶ ವಗ್ಗೆ, ತುಕಾರಾಮ ಹಸನ್ಮುಖಿ, ಮಲ್ಲಿಕಾರ್ಜುನ ಜೊನ್ನೇಕೆರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.