ಜಿಲ್ಲೆ

ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು

ಹಾಸನ : ಬೈಕಿಗೆ ಎದುರು ಗಡೆಯಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರು-ಮಂಗಳೂರು ಬೈಪಾಸ್ ರಸ್ತೆಯಲ್ಲಿ ಆರ್.ಆರ್ ಗ್ರಾನೈಟ್ ಮುಂಭಾಗದ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿಯ ಶ್ರೀರಾಮನಗರ ನಿವಾಸಿ ಕಿರಣ್‌ಪಟೇಲ್ (27) ಮೃತ ಎಲೆಕ್ಟ್ರಿಷನ್.

ಭಾನುವಾರ ಕಿರಣ್ ಕುಮಾರ್ ಎಲೆಕ್ಟ್ರಿಕಲ್ ಕೆಲಸಕ್ಕೆಂದು ತನ್ನ ಬೈಕಿನಲ್ಲಿ ಹೋಗಿ ರಾತ್ರಿ ಮನೆಗೆ ವಾಪಸ್ಸಾಗುತ್ತಿದ್ದರು. ರಾತ್ರಿ 8.30ರ ಸಮಯದಲ್ಲಿ ರಾಜಘಟ್ಟ ಮಾರ್ಗವಾಗಿ ಬೆಂಗಳೂರು-ಮಂಗಳೂರು ಬೈಪಾಸ್ ರಸ್ತೆಯಲ್ಲಿ ಆರ್.ಆರ್ ಗ್ರಾನೈಟ್ ಮುಂಭಾಗದ ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದಾಗ ಮಂಗಳೂರು ಕಡೆಯಿಂದ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದ ಚಾಲಕ ಕಿರಣ್‌ಪಟೇಲ್ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಮಾಡಿ, ನಿಲ್ಲಿಸದೇ ಪರಾರಿಯಾಗಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಕೂಡಲೇ ಕಿರಣ್ ಕುಮಾರ್‌ನನ್ನು ಸ್ಥಳೀಯರು ಹಾಸನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಅಪಘಾತ ಮಾಡಿ, ಕಿರಣ್‌ಪಟೇಲ್ ಸಾವಿಗೆ ಕಾರಣವಾದ ಕಾರಿನ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ತಂದೆ ರಾಮಕೃಷ್ಣ ಅವರು ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.