ಜಿಲ್ಲೆ

ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು

ಪಾಂಡವಪುರ: ತಾಲೂಕಿನ ಹಿರೇಮರಳಿ ಗೇಟ್ ಸಮೀಪದ ಇಟ್ಟಿಗೆಗೂಡಿನ ಮುಂಭಾಗದ ರಸ್ತೆ ಬದಿಯಲ್ಲಿ ನಿಂತಿದ್ದ ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಯುವಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ.


ತಾಲೂಕಿನ ದೊಡ್ಡಬ್ಯಾಡರಹಳ್ಳಿ ನಿವಾಸಿ ಕುಮಾರ್ ಅವರ ಪುತ್ರ ಡಿ.ಕೆ.ರವಿ ಮೃತ. ತಂದೆ ಕುಮಾರ ಮಗನನ್ನು ಕರೆದುಕೊಂಡು ಟೊಮ್ಯಾಟೊ ಸಸಿಗಳನ್ನು ತರಲು ತಾಲೂಕಿನ ಬನಘಟ್ಟ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯೆ ರಸ್ತೆ ಬದಿಗೆ ಬೈಕ್ ನಿಲ್ಲಿಸಿ ಮಗನನ್ನು ಬೈಕಿನ ಹಿಂಬದಿಯಲ್ಲಿ ಕೂರಿಸಿ ಮೂತ್ರ ವಿಸರ್ಜನೆಗೆಂದು ತೆರಳಿದ್ದ ವೇಳೆ ನಾಗಮಂಗಲದಿಂದ ಪಾಂಡವಪುರ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸಮೇತವಾಗಿ ಯುವಕನನ್ನು ಅನತಿ ದೂರ ಎಳೆದುಕೊಂಡು ಹೋಗಿದೆ. ಡಿಕ್ಕಿ ರಭಸಕ್ಕೆ ಯುವಕನ ತಲೆ, ಎದೆ ಭಾಗದಲ್ಲಿ ತೀವ್ರ ಗಾಯವಾಗಿದ್ದು, ತಕ್ಷಣ ಆತನನ್ನು ಪಾಂಡವಪುರ ಉಪ ವಿಭಾಗೀಯ ಆಸ್ಪತ್ರೆಗೆ ಕರದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸುವ ವೇಳೆ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.


ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಅಪಘಾತಕ್ಕೀಡಾದ ಎರಡೂ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.