ಜಿಲ್ಲೆ

ಕಾರು ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

ಮದ್ದೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದ್ದೂರು ಬೈಪಾಸ್ ರಸ್ತೆಯಲ್ಲಿ ಮಂಗಳವಾಸರ ರಾತ್ರಿ ಕಾರು ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಪಟ್ಟಣದ ಕೆ.ಕೋಡಿಹಳ್ಳಿ ಬಳಿ ಮಂಗಳವಾರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬರು ಬೈಪಾಸ್ ರಸ್ತೆಯನ್ನು ದಾಟುತ್ತಿದ್ದ ವೇಳೆ ಮೈಸೂರಿನಿಂದ ಬೆಂಗಳೂರಿಗೆ ವೇಗವಾಗಿ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿ ಕಾರಿನ ಮೇಲೆ ಬಿದ್ದ ನಂತರ ಹೆದ್ದಾರಿಯ ಮಧ್ಯ ಭಾಗಕ್ಕೆ ಹೋಗಿ ಬಿದ್ದಿದ್ದಾರೆ. ಕಾರಿನ ಹಿಂದೆಯೇ ವೇಗವಾಗಿ ತೆರಳುತ್ತಿದ್ದ ವಾಹನಗಳು ವ್ಯಕ್ತಿಯ ಮೇಲೆ ನಿರಂತರವಾಗಿ ಚಲಿಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಶವವನ್ನು ಗುರುತಿಸಲಾಗದಷ್ಟು ಕಷ್ಟ ಸಾಧ್ಯವಾಗಿದೆ.


ತಕ್ಷಣವೇ ಸ್ಥಳೀಯರು ಮತ್ತು ಸಂಚಾರ ಪೊಲೀಸರು ಶವವನ್ನು ಹೆದ್ದಾರಿಯಿಂದ ಹೊರ ತೆಗೆದು ಮಂಡ್ಯ ಮಿಮ್ಸ್‌ನ ಶವಾಗಾರಕ್ಕೆ ರವಾನಿಸಿದರು. ಪ್ರಕರಣ ಸಂಬಂಧ ಸಂಚಾರ ಪೊಲೀಸರು ರಾತ್ರಿಯೇ ಕಾರನ್ನು ವಶಕ್ಕೆ ಪಡೆದು ಕಾರು ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಂಡ್ಯ ಜಿಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಯಾರಾದರೂ ಪುರುಷ ಕಾಣೆಯಾಗಿದ್ದರೆ ಸಂಬಂಧಪಟ್ಟವರು ಸಂಶಯವಿದ್ದಲ್ಲಿ ಹೋಗಿ ಪರಿಶೀಲನೆ ಮಾಡಬಹುದು ಎಂದು ಪೊಲೀಸರು ಮನವಿ ಮಾಡಿದ್ದಾರೆ.