ಜಿಲ್ಲೆ

ಕಾರು ಉರುಳಿ ಚಾಲಕ ಸಾವು

ಬೇಲೂರು: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟಿಕೆರೆ ಗ್ರಾಮದ ಸಮೀಪ ಭಾನುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಅಡಕೆ ತೋಟದ ಬಳಿ ಉರುಳಿ ಬಿದಿದ್ದರಿಂದ ಚಾಲಕ ಸ್ಥಳದಲ್ಲೇ ಮೃತಪಟ್ಟು, ಆತನ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೇಲೂರು ಪಟ್ಟಣ ಸಮೀಪದ ನಿವಾಸಿ 46 ವರ್ಷದ ದಯಾನಂದ್ ಮೃತರು. ಇವರ ಪುತ್ರಿ 10ನೇ ತರಗತಿ ಓದುತ್ತಿರುವ ನಿಶ್ಮಿತಾ ಗಂಭೀರವಾಗಿ ಗಾಯಗೊಂಡು ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ದಯಾನಂದ್ ಅವರು ತಮ್ಮ ಪತ್ನಿ ಹಾಗೂ ಪುತ್ರಿಯೊಂದಿಗೆ ಮಂಗಳೂರಿನಲ್ಲಿ ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಬರುವಾಗ ಚಿಕ್ಕಮಗಳೂರಿನಲ್ಲಿ ಪತ್ನಿಯನ್ನು ಬಿಟ್ಟು ಪುತ್ರಿಯೊಂದಿಗೆ ಬೇಲೂರಿಗೆ ಕಾರಿನಲ್ಲಿ ಭಾನುವಾರ ರಾತ್ರಿ ಆಗಮಿಸುತಿದ್ದ ಸಂದರ್ಭ ತಾಲೂಕಿನ ಕೊರಟಿಕೆರೆ ಸಮೀಪ ನಿಯಂತ್ರಣ ತಪ್ಪಿ ಕಾರು ಅಡಕೆ ತೋಟದ ಬಳಿ ತಲೆಕೆಳಗಾಗಿ ಉರುಳಿ ಬಿತ್ತು. ದಯಾನಂದ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟರು. ಇವರ ಪುತ್ರಿ ನಿಶ್ಮಿತಾ ಗಂಭೀರವಾಗಿ ಗಾಯಗೊಂಡರು. ಸ್ಥಳಕ್ಕೆ ಬೇಲೂರು ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

ಮೃತ ದಯಾನಂದ್ ಬೇಲೂರಿನಲ್ಲಿ ಮಾನವ ಹಕ್ಕು ಕಾರ್ಯಕರ್ತರಾಗಿ, ಕನ್ನಡಪರ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದರು. ಮೃತರ ಅಂತ್ಯಕ್ರಿಯೆ ಬೇಲೂರಿನಲ್ಲಿ ಸೋಮವಾರ ನಡೆಸಲಾಯಿತು.