ಹಾವೇರಿ: ನಗರದಿಂದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಕಾರಿನಲ್ಲಿ ಮದ್ಯ ಸಾಗಿಸುತ್ತಿದ್ದ ವಾಹನವನ್ನು ಪತ್ತೆ ಹಚ್ಚಿದ ಅಬಕಾರಿ ಪೊಲೀಸರು ಕಾರು, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ನೀರಾವರಿ ಇಲಾಖೆಯ ಕಚೇರಿ ಬಳಿ ಸ್ಥಾಪಿಸಿರುವ ಚೆಕ್ಪೋಸ್ಟ್ ಮೂಲಕ ನಾಲ್ವರು ಆರೋಪಿತರು ಕೆಎ-17-ಡಿ-2362 ಮಹೀಂದ್ರಾ ವೆರಿಟೋ ಕಾರಿನಲ್ಲಿ 4.86 ಲೀಟರ್ ವಿವಿಧ ಬ್ರಾ್ಯಂಡ್ನ ಮದ್ಯವನ್ನು ಸಾಗಾಟ ಮಾಡುತ್ತಿದ್ದರು. ಈ ವೇಳೆ ದಾಳಿ ನಡೆಸಿ ಇಬ್ಬರು ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರವನ್ನು ವಿಚಾರಣೆ ನಡೆಸಿದಾಗ ಅವರು ಶಿಗ್ಗಾಂವಿಯಿಂದ ಮದ್ಯ ತಂದಿರುವುದಾಗಿ ಒಪ್ಪಿಕೊಂಡಿದ್ದರು. ಅವರ ಹೇಳಿಕೆ ಆಧಾರದಲ್ಲಿ ದಾಳಿ ಮಾಡಿ ಅಲ್ಲಿ ಇಬ್ಬರನ್ನು ಬಂಧಿಸಿ 1.5 ಲೀಟರ್ ಮದ್ಯ ಹಾಗೂ 4,290 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರಿನ ಮಾಲೀಕ ಹಾಗೂ ಮದ್ಯ ಪೂರೈಸಿದ ಸನ್ನದುದಾರರನ್ನು ಈ ಕೃತ್ಯದಲ್ಲಿ ಆರೋಪಿಗಳು ಎಂದು ಪ್ರಕರಣ ದಾಖಲಿಸಿದ್ದು, ಅವರು ಪರಾರಿಯಾಗಿದ್ದಾರೆ. ಸೌರಭ ಮಹೇಶ ಕಲಾಲ, ವಿಶ್ವ ವಿಷ್ಣು ಕಲಾಲ, ರಾಘವೇಂದ್ರ ನಾರಾಯಣ ಬಡಾಂಗಕರ, ಪ್ರಕಾಶ ಯಚ್ಚರಪ್ಪ ಗಂದಗಲಕರ ಬಂಧಿತ ಆರೋಪಿಗಳು.
ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ಹೊನ್ನಪ್ಪ ಓಲೇಕಾರ, ಸಿಪಿಐ ಮಹೇಶ್ವರಗೌಡ ಪಾಟೀಲ, ಪಿಎಸ್ಐ ಪಿ.ಜೆ. ಜಾನ್, ಸಿಬ್ಬಂದಿಗಳಾದ ಎನ್.ಟಿ. ಬಿಷ್ಟಣ್ಣನವರ, ನಾಗನಗೌಡ ಪಾಟೀಲ, ಮಹೇಶ ಬ್ಯಾಡಗಿ, ವಿ.ಜಿ. ಕುಂಬಾರ, ಡಿ.ಎನ್. ನರಗುಂದ ಪಾಲ್ಗೊಂಡಿದ್ದರು.