ಹಾಸನ: ಕಾರಿನಲ್ಲಿ ಬಂದ ಹೈಟೆಕ್ ಕಳ್ಳರು ಕಬ್ಬಿಣವನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಹಾಸನ ಹೊರವಲಯದ ಬೂವನಹಳ್ಳಿ ಬೈಪಾಸ್ ಬಳಿ ಇತ್ತೀಚೆಗೆ ನಡೆದಿದೆ. ಪಾಪೇಗೌಡ ಎಂಬುವವರಿಗೆ ಸೇರಿದ ಶ್ರೀ ಸಾಯಿ ಇಂಜಿನಿಯರಿಂಗ್ ವರ್ಕ್ಸ್‌ನಲ್ಲಿ ಕಳ್ಳತನ ನಡೆದಿದೆ. ಜು.12ರಂದು ಬೆಳ್ಳಿನ ಜಾವ 4.30 ಸುಮಾರಿನಲ್ಲಿ ಕಾರಿನಲ್ಲಿ ಬಂದ ಕಳ್ಳರು ಕೆಲ ಸಮಯ ಹೊಂಚು ಹಾಕುತ್ತಾರೆ. ನಂತರ ಕಾರಿನಿಂದ ಓರ್ವ ಕಳ್ಳ ಕೆಳಗಿಳಿಯುತ್ತಾನೆ. ಮುಖಕ್ಕೆ ಸ್ವೆಟರ್ ಸುತ್ತಿಕೊಂಡು ಇಂಜಿನಿಯರ್ ವರ್ಕ್ಸ್ ಪಕ್ಕದಲ್ಲಿ ಇಟ್ಟಿದ್ದ ಕಬ್ಬಿಣವನ್ನು ನೋಡಿ ಕಬ್ಬಿಣಕ್ಕೆ ಹಾಕಿದ ಚೈನ್ ಕಟ್ ಮಾಡಿ ಸುಮಾರು 150 ಕೆಜಿ ಕಬ್ಬಿಣದ ತುಂಡುಗಳನ್ನು ಕಾರಿಗೆ ತುಂಬಿಕೊಂಡು ಪರಾರಿಯಾಗುತ್ತಾನೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಾಪೇಗೌಡ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.