ಗುಂಡ್ಲುಪೇಟೆ: ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗೃಹಿಣಿ ಮೃತಪಟ್ಟಿದ್ದು, ಪತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಲೂಕಿನ ಸಿದ್ದಯ್ಯನಹುಂಡಿ ಗ್ರಾಮದ ಸಮೃದ್ಧಿ (22) ಮೃತಪಟ್ಟರೆ, ಆಕೆಯ ಪತಿ ನಾಗೇಂದ್ರಸ್ವಾಮಿಗೆ ತೀವ್ರ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದ ಹೊರವಲಯದ ಎಪಿಎಂಸಿ ಮಾರುಕಟ್ಟೆ ಬಳಿ ಮೈಸೂರಿನಿಂದ ಊಟಿಗೆ ತೆರಳುತ್ತಿದ್ದ ಕಾರಿಗೆ ಎದುರಿನಿಂದ ವೇಗವಾಗಿ ಬಂದ ತಮಿಳುನಾಡು ಮೂಲದ ಲಾರಿ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಬೆಂಗಳೂರಿನ ಬನಶಂಕರಿಯಲ್ಲಿ ವಾಸವಿದ್ದ ದಂಪತಿ, ಊಟಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಮೃತ ಸಮೃದ್ಧಿ ಎಪಿಎಂಸಿ ಮಾಜಿ ಅಧ್ಯಕ್ಷ, ತಾಲೂಕಿನ ಹಸಗೂಲಿ ಗ್ರಾಮದ ಗಂಗಾಧರಪ್ಪ ಅವರ ಮೊಮ್ಮಗಳು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.