ಜಿಲ್ಲೆ

ಕಾರಿಗೆ ಟಿಪ್ಪರ್ ಡಿಕ್ಕಿ ಬೆಟ್ಟಕ್ಕೆ ಹೋಗುತ್ತಿದ್ದ ಐವರು ಸ್ನೇಹಿತರು ಸಾವು

ಕೊಳ್ಳೇಗಾಲ: ಮಹಾ ಶಿವರಾತ್ರಿ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ ಶನಿವಾರ ನಡೆದ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳಲು ಕೊಳ್ಳೇಗಾಲದ ಚಿಕ್ಕಿಂದುವಾಡಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಐವರು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂಲತಃ ಕೊಳ್ಳೇಗಾಲದ ಕೆಂಪನಪಾಳ್ಯ ಗ್ರಾಮದ, ಪ್ರಸ್ತುತ ಮೈಸೂರಿನ ಆಲನಹಳ್ಳಿಯಲ್ಲಿ ವಾಸವಿರುವ ಶ್ರೀಲಕ್ಷ್ಮೀ (20), ಮಂಡ್ಯ ತಾಲೂಕಿನ ಲಕ್ಷ್ಮೇಗೌಡನ ದೊಡ್ಡಿಯ ನಿತಿನ್ (21), ಹೊಸಹಳ್ಳಿಯ ಶ್ರೀರಾಮನಗರದ ಸುಹಾಸ್ (21), ಹಲ್ಲೇಗೆರೆ ಶ್ರೇಯಸ್ (21), ಪಿರಿಯಾಪಟ್ಟಣದ ತಾಲೂಕಿನ ಶಾನುಭೋಗನ ಹಳ್ಳಿಯ ಲಿಖಿತಾ(20) ಮೃತರು. ಸ್ಥಳದಿಂದ ಪರಾರಿಯಾಗಿರವ ಟಿಪ್ಪರ್ ಚಾಲಕನ ಮಾಹಿತಿ ತಿಳಿದುಬಂದಿಲ್ಲ.

ಘಟನೆಯ ವಿವರ: ಮೈಸೂರಿನಲ್ಲಿ ನಿತಿನ್ ಡಿಪ್ಲೋಮೊ ಮಾಡುತ್ತಿದ್ದ. ಶ್ರೀಲಕ್ಷ್ಮೀ, ಸುಹಾಸ್, ಶ್ರೇಯಸ್, ಲಿಖಿತಾ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಶ್ರೀಮಹಾಶಿವರಾತ್ರಿ ಹಿನ್ನಲೆ ಶನಿವಾರ ಶ್ರೀಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುವ ನಿರ್ಧರಿಸಿದ್ದರು. ಅಂತೆಯೇ ಶ್ರೀಲಕ್ಷ್ಮೀ ಮನೆಯಿಂದ ಬೆಳಗ್ಗೆ ಕಾರಿನಲ್ಲಿ(ಶ್‌ಟಿ ಡಿಜೈರ್) ಹೊರಟರು. ಚಿಕ್ಕಿಂದುವಾಡಿ ರಸ್ತೆಯ ವಡರಕಟ್ಟೆಯ ಬಳಿ ಬರುವಾಗ ಎದುರು ಬಂದ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದಿದೆ. ಮುಖಾಮುಖಿಯ ಡಿಕ್ಕಿಯ ರಭಸಕ್ಕೆ ಕಾರು ಮತ್ತು ಟಿಪ್ಪರ್ ರಸ್ತೆ ಪಕ್ಕದ ಹಳ್ಳದಲ್ಲಿರುವ ಜಮೀನಿಗೆ ಉರುಳಿವೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಒಳಗಿದ್ದ ಐವರು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಪ್ಪರ್‌ನ ಮುಂಭಾಗ ಜಖಂಗೊಂಡಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಐಜಿಪಿ ಭೇಟಿ:

ಅಪಘಾತ ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಎಸ್ಪಿ ಶಶಿಧರ್, ಡಿವೈಎಸ್ಪಿ ಧಮೇಂದ್ರ, ಸಿಪಿಐ ಶಿವಮಾದಯ್ಯ, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್, ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಭೇಟಿ ನೀಡಿ ಪರಿಶೀಲಿಸಿದರು. ಹಳಕ್ಕೆ ಉರುಳಿದ್ದ ಕಾರು-ಟಿಪ್ಪರ್‌ಅನ್ನು ಕ್ರೇನ್ ಸಹಾಯದಿಂದ ಮೇಲೆತ್ತಲಾಯಿತು. ನಜ್ಜುಗುಜ್ಜಾಗಿದ್ದ ಕಾರಿನ ಒಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಯಿತು. ಮೃತರ ಪಾಲಕರು, ಸಂಬಂಧಿಕರು ಆಕ್ರಂದನ ಮುಗಿಲುಮುಟ್ಟಿತ್ತು.

ಟಿಪ್ಪರ್ ಎದುರು ಬರುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಸುಮಾರು 20 ಮೀಟರ್ ಎಳೆದೊಯ್ದಿದೆ. ನಂತರ ಎರಡು ವಾಹನಗಳು ರಸ್ತೆ ಬದಿಯ ಭತ್ತದ ಜಮೀನಿಗೆ ಉರುಳಿವೆ. ಪರಾರಿಯಾಗಿರುವ ಟಿಪ್ಪರ್ ಚಾಲಕ ಪತ್ತೆಗೆ ಮುಂದಾಗಿದ್ದೇವೆ.

-ಡಾ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ