ಕುಂದಾಣ: ಕಾರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದರೂ ಶಾಲೆಯಲ್ಲಿ ಸೂಕ್ತ ಶೌಚಗೃಹ, ಕಾಂಪೌಂಡ್ ವ್ಯವಸ್ಥೆ ಇಲ್ಲದಂತಾಗಿದೆ.
ಶಾಲೆಯಲ್ಲಿ ಬಹುತೇಕ ಬಡ ಹಾಗೂ ಹಿಂದುಳಿದ ವರ್ಗಗಳ ಕುಟುಂಬದ ಮಕ್ಕಳೇ ಹೆಚ್ಚು. ಸದ್ಯ ಬಳಸಲು ಯೋಗ್ಯವಲ್ಲದ ಮಾದರಿಯಲ್ಲಿ ಶೌಚಗೃಹ ಇದೆ. ಆದ್ದರಿಂದ ಶೌಚಗೃಹ ನಿರ್ಮಾಣಕ್ಕೆ ಬೇಡಿಕೆ ಇಡಲಾಗಿತ್ತು. ಆದರೆ ಕೆಲ ಕಾರಣಗಳಿಂದ ಅದರ ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡಿದೆ. ಶಾಲೆ ಸುತ್ತ ಕಾಂಪೌಂಡ್ ಇಲ್ಲದೆ ಪ್ರಾಣಿ ಪಕ್ಷಿಗಳ ಆಶ್ರಯ ತಾಣದಂತಾಗಿದೆ.
ಶಾಲೆ ಆವರಣದ ಸುತ್ತ ಗಿಡ-ಗಂಟಿ ವ್ಯಾಪಿಸಿವೆ. ಶಾಲೆ ಕಾಂಡಿನಂಚಿನ ಸ್ಥಳವಾಗಿರುವುದರಿಂದ ವಿಷಜಂತುಗಳು ಶಾಲೆಯೊಳಗೆ ಬರುವುದು ಸಾಮಾನ್ಯ ಎಂಬಂತಾಗಿದೆ. ಸುತ್ತಮುತ್ತಲಿನಿಂದ ಜಾನುವಾರುಗಳು ಕೂಡ ಶಾಲೆಯ ಆವರಣದಲ್ಲಿ ಠಿಕಾಣಿ ಹೂಡುತ್ತವೆ. ಹೀಗಾಗಿ ಶಾಲೆಗೆ ಕಾಂಪೌಂಡ್ ನಿರ್ಮಿಸುವಂತೆ ಹಲವು ಬಾರಿ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಇಲ್ಲಿನ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳ ಜಾಣ ಕುರುಡಿನಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ. ಇನ್ನಾದರೂ ಜನಪ್ರತಿನಿಧಿಗಳು, ಆಡಳಿತ ವರ್ಗ ಎಚ್ಚೆತ್ತು ಶಾಲೆಯ ಪ್ರಗತಿಗೆ ಪೂರಕವಾಗಿರುವ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
ಪ್ರಭಾವಿಗಳ ಕಪಿಮುಷ್ಟಿಯಿಂದ ಅಭಿವೃದ್ಧಿ ಕುಂಠಿತ: ಶಾಲೆಯ ಕಾಂಪೌಂಡ್ ನಿರ್ಮಾಣಕ್ಕೆ ಪ್ರಭಾವಿ ರಾಜಕಾರಣಿಗಳು ಅಡ್ಡಿಯಾಗಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ. ಶಾಲೆಗೆ ಮಂಜೂರಾದ ಅಡುಗೆ ಕೋಣೆ ನಿರ್ಮಿಸಲು ಬಿಡದೆ ಬೇರೆ ಶಾಲೆಗೆ ಕಾಮಗಾರಿ ನೀಡಿದ್ದಾರೆ. ನಿರ್ಮಿತಿ ಕೇಂದ್ರದಿಂದ ಶೌಚಗೃಹ ನಿರ್ಮಾಣ ಮಾಡುವುದನ್ನು ತಡೆದಿದ್ದಾರೆ. 2018ರಲ್ಲಿ ಹೊಸ ಕಟ್ಟಡದಲ್ಲಿ ಈ ಪ್ರೌಢಶಾಲೆ ಪ್ರಾರಂಭಿಸಲಾಗಿದೆ. ಈಗ 152 ವಿದ್ಯಾರ್ಥಿಗಳಿದ್ದಾರೆ. ಕೋವಿಡ್ ಮಹಾಮಾರಿ ಬರುವ ಮುಂಚೆ ಈ ಶಾಲೆ ಶೇ.98 ರವರೆಗೆ ಫಲಿತಾಂಶ ದಾಖಲಿಸುತ್ತಿತ್ತು. ಆದರೆ ಇಂತಹ ಶಾಲೆಗೆ ಮೂಲಸೌಕರ್ಯಗಳಿಗೆ ಆದ್ಯತೆ ನೀಡದಿರುವ ಬಗ್ಗೆ ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕಾಡಿನ ಪಕ್ಕದಲ್ಲಿರುವ ಈ ಶಾಲೆ ಆವರಣದಲ್ಲಿ ವಿಷಜಂತುಗಳು, ಕಾಡು ಪ್ರಾಣಿಗಳು ಓಡಾಡುವುದರಿಂದ ಮಕ್ಕಳು ಅಪಾಯಕಾರಿ ಸ್ಥಳದಲ್ಲೇ ಸಂಚರಿಸುವಂತಾಗಿದೆ. ಆವರಣದ ಸುತ್ತ ಕಾಂಪೌಂಡ್ ನಿರ್ಮಿಸಿದಲ್ಲಿ ಮುಂದೆ ಸಂಭವಿಸಬಹುದಾದ ಅಪಾಯ ತಪ್ಪಿಸಬಹುದು. ಪ್ರಕಾಶ್ ಕಾರಹಳ್ಳಿ, ಸ್ಥಳೀಯ ಶಾಲೆಯ ಸುತ್ತ ಜಾಗದ ಸರ್ವೇ ಮಾಡಲಾಗಿದೆ. ಕಾಂಪೌಂಡ್ ನಿರ್ಮಾಣಕ್ಕೆ ಅಡ್ಡಿ ಇಲ್ಲ. ನರೇಗಾದಲ್ಲಿ ಪೂರ್ತಿಯಾಗಿ ಕಾಂಪೌಂಡ್ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಜಿಪಂ ಅನುದಾನ ಬಂದ ತಕ್ಷಣ ಕಾಂಪೌಂಡ್ ನಿರ್ಮಾಣ ಆಗಲಿದೆ. ಅಶ್ವತ್ಥ್‌ನಾರಾಯಣ, ಬಿಇಒ, ದೇವನಹಳ್ಳಿ