ಕಾರವಾರ: ಗುರುವಾರ ರಾತ್ರಿಯಿಂದ ಕರಾವಳಿಯಲ್ಲಿ ಉತ್ತಮ ಮಳೆ ಸುರಿಯಲಾರಂಭಿದ್ದು, ಕಾರವಾರದಲ್ಲಿ ಒಂದು ನಿಮಿಷವೂ ಬಿಡದೇ ಒಂದೇ ಸಮನೇ ಮಳೆ ಸುರಿಯುತ್ತಿದೆ. ಇದರಿಂದ ಚರಂಡಿಗಳು ಉಕ್ಕಿ ಹರಿಯುತ್ತಿವೆ. ಆದರೆ, ಗಾಳಿ ಇಲ್ಲದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ.
ಮಳೆ ವಿವರ: ಶುಕ್ರವಾರ ಬೆಳಗಿನ ವರದಿಯಂತೆ ಜಿಲ್ಲೆಯ ಅಂಕೋಲಾದಲ್ಲಿ 70.4 ಮಿ.ಮೀ., ಭಟ್ಕಳ-35, ಹಳಿಯಾಳ- 5.8, ಹೊನ್ನಾವರ- 89.7, ಕಾರವಾರ- 81.1, ಕುಮಟಾ- 71.4, ಮುಂಡಗೋಡ- 6, ಸಿದ್ದಾಪುರ- 35.4, ಶಿರಸಿ- 21, ಜೊಯಿಡಾ- 18, ಯಲ್ಲಾಪುರದಲ್ಲಿ 15.6 ಮಿ.ಮೀ. ಮಳೆಯಾಗಿದೆ. ಕಾರವಾರದಲ್ಲಿ ಶುಕ್ರವಾರ ಬೆಳಗಿನಿಂದ ಸಾಯಂಕಾಲ 5 ಗಂಟೆಯವರೆಗೆ 46. 4 ಮಿ.ಮೀ. ಮಳೆಯಾಗಿದೆ.
ಕೊಳವಾದ ಕೆಎಚ್ಬಿ: ನಗರದ ಕೆಎಚ್ಬಿ ಕಾಲನಿ ಮಳೆಗೆ ಕೊಳವಾಗಿ ಪರಿವರ್ತನೆಯಾಗಿದೆ. ಕಾಲನಿಯ ವಿವಿಧೆಡೆ ಅರೆಬರೆ ಚರಂಡಿ ಕಾಮಗಾರಿಯಾಗಿದ್ದು, ಅಲ್ಲೆಲ್ಲ ನೀರು ತುಂಬಿಕೊಂಡಿದೆ. ಹಲವು ಓಣಿಗಳ ಚರಂಡಿ ತುಂಬಿ ರಸ್ತೆಯ ಮೇಲೆ ನೀರು ನಿಂತಿದೆ. ಮಳೆ ಮುಂದುವರಿದರೆ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಖಾಲಿ ಸೈಟ್ಗಳು, ಕ್ರೀಡಾಂಗಣ ತುಂಬಿ ದೊಡ್ಡ ಸರೋವರದಂತಾಗಿದೆ. ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಉಂಟಾಗಿದೆ ಎಂಬುದು ಕೆಎಚ್ಬಿ ನಿವಾಸಿಗಳ ಅಳಲು.
ಕರೊನಾ ಕಾರಣದಿಂದ ಚರಂಡಿ ಕಾಮಗಾರಿ ವಿಳಂಬವಾಗಿದೆ. 15 ಕಾರ್ವಿುಕರು ಹಾಗೂ ಜೆಸಿಬಿ ಕೆಲಸ ಮಾಡುತ್ತಿದೆ. ಶೀಘ್ರದಲ್ಲಿ ಮುಗಿಸಲಿದ್ದೇವೆ. ಇನ್ನು ನೀರು ತುಂಬಲು ಜನರ ಅಸಹಕಾರವೂ ಕಾರಣ. ಹಲವೆಡೆ ನೀರು ಹೋಗುವ ಕಾಲುವೆಗಳನ್ನು ಅತಿಕ್ರಮಣ ಮಾಡಲಾಗಿದೆ. ಇನ್ನು ಕಸಗಳನ್ನು ತಂದು ಚರಂಡಿಗೆ ಎಸೆಯುತ್ತಿರುವುದರಿಂದ ಎಲ್ಲೆಡೆ ಚರಂಡಿ ಕಟ್ಟಿ ನಿಲ್ಲುತ್ತಿದೆ. | ಆರ್.ಪಿ. ನಾಯ್ಕ ಕಾರವಾರ ನಗರಸಭೆ ಎಇಇ
3 ದಿನಗಳಿಂದ ಮಳೆ ಬಿರುಸು: ಸಿದ್ದಾಪುರ ತಾಲೂಕಿನಾದ್ಯಂತ ಮಾನ್ಸೂನ್ ಆರಂಭವಾದಂತೆ ಕಂಡು ಬರುತ್ತಿದ್ದು, ಮೂರು ದಿನಗಳಿಂದ ಮಳೆ ಸುರಿಯುತ್ತಿದೆ. ಈ ವರ್ಷ ಇಂದಿನವರೆಗೆ 295.6 ಮಿ.ಮೀ. ಮಳೆ ಬಿದ್ದು ದಾಖಲಾಗಿದೆ. ಕಳೆದ ವರ್ಷ ಮಳೆಗಾಲ ಜೂ. 15ರ ನಂತರ ಆಗಿರುವುದರಿಂದ ಜೂ. 12ಕ್ಕೆ ಕೇವಲ 28.2 ಮಿ.ಮೀ. ಮಳೆ ಬಿದ್ದರೆ 2018ರಲ್ಲಿ ಜೂ. 12ರವರೆಗೆ 561.8 ಮಿ.ಮೀ. ಮಳೆ ಬಿದ್ದು ದಾಖಲಾಗಿತ್ತು. ಗುರುವಾರ ರಾತ್ರಿ ಸುರಿದ ಗಾಳಿ-ಮಳೆಗೆ 6 ವಿದ್ಯುತ್ ಕಂಬ, 4 ಟಿಸಿ ಹಾಳಾಗಿವೆ ಎಂದು ಹೆಸ್ಕಾಂ ಅಧಿಕಾರಿ ಡಿ.ಟಿ. ಹೆಗಡೆ ತಿಳಿಸಿದ್ದಾರೆ.