ಜಿಲ್ಲೆ

ಕಾರವಾರ ಭೂ ಸ್ವಾಧಿನಾಧಿಕಾರಿ ಕಚೇರಿ ಆಸ್ತಿ ಬೆಳಗ್ಗೆ ಜಪ್ತು, ಸಾಯಂಕಾಲ ವಾಪಸ್!


ವಿಜಯವಾಣಿ ಸುದ್ದಿಜಾಲ ಕಾರವಾರ
ಭೂ ಸ್ವಾಧೀನದ ಪರಿಹಾರ ಹಣಕ್ಕೆ ಆದಾಯ ತೆರಿಗೆ ಕಡಿತ ಮಾಡಿದ ಪ್ರಕರಣಕ್ಕೆ ಸಂಬಂಸಿದಂತೆ ಇಲ್ಲಿನ ಸೀಬರ್ಡ್ ನೌಕಾನೆಲೆ ವಿಶೇಷ ಭೂ ಸ್ವಾಧಿನಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ಬೆಳಗ್ಗೆ ಜಪ್ತು ಮಾಡಿ ಸಾಯಂಕಾಲ ಮರಳಿಸಿದ ಘಟನೆ ಶುಕ್ರವಾರ ನಡೆಯಿತು.
ಸೀಬರ್ಡ್ ನೌಕಾನೆಲೆಗೆ ಜಮೀನು ಭೂ ಸ್ವಾಧೀನ ಮಾಡಿಕೊಂಡ ಪ್ರಕರಣವೊಂದಕ್ಕೆ ಸಂಬಧಿಸಿದಂತೆ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಶುಕ್ರವಾರ ಬೆಳಗ್ಗೆ ಕಚೇರಿಯ ಪೀಠೋಪಕರಣಗಳನ್ನು ನ್ಯಾಯಾಲಯದ ಮೂವರು ಬೇಲೀಫರು ವಕೀಲ ಕೆ.ಆರ್.ದೇಸಾಯಿ ಹಾಗೂ ನಿರಾಶ್ರಿತರ ಸಮ್ಮುಖದಲ್ಲಿ ಜಪ್ತು ಮಾಡಿದರು. ಆದರೆ, ನ್ಯಾಯಾಲಯವು ಜಪ್ತು ಆದೇಶವನ್ನು ಸಾಯಂಕಾಲ ರದ್ದು ಮಾಡಿದ್ದರಿಂದ ಪೀಠೋಪಕರಣಗಳನ್ನು ಮರಳಿಸಲಾಯಿತು.
ಹಿನ್ನೆಲೆ:
ಸೀಬರ್ಡ್ ನೌಕಾ ಯೋಜನೆಗೆ ಭೂಸ್ವಾಧೀನ ಮಾಡಿಕೊಂಡ ಅರಗಾದ ಶೀಲಾ ನಾಗೇಶ ದಾಂಡೇಕರ್ ಅವರ 1 ಎಕರೆ 1 ಗುಂಟೆ ಜಮೀನಿಗೆ ಸರ್ಕಾರ ನೀಡಬೇಕಾಗಿದ್ದ ಒಟ್ಟಾರೆ ಪರಿಹಾರದಲ್ಲಿ 4.79 ಲಕ್ಷ ರೂ.ಗಳನ್ನು ಆದಾಯ ತೆರಿಗೆ ಎಂದು ಕಡಿತ ಮಾಡಿಕೊಳ್ಳಲಾಗಿತ್ತು. ಆದರೆ, ರೈತರಿಗೆ ನೀಡುವ ಭೂಸ್ವಾಧೀನ ಪರಿಹಾರಕ್ಕೆ ಆದಾಯ ತೆರಿಗೆ ಕಡಿತ ಮಾಡಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಇಲ್ಲಿನ ಭೂ ಸ್ವಾಧಿನಾಧಿಕಾರಿ ಕಚೇರಿ ನಿಯಮ ಪಾಲಿಸಿಲ್ಲ ಎಂದು ಶೀಲಾ ಅವರು ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಕಳೆದ 8 ತಿಂಗಳ ಹಿಂದೆ ನ್ಯಾಯಾಲಯ ನಿರಾಶ್ರಿತರ ಪರ ಆದೇಶ ನೀಡಿ, ಕಡಿತ ಮಾಡಿದ ಆದಾಯ ತೆರಿಗೆ ಹಣ 4.79 ಲಕ್ಷ ರೂ.ಗಳನ್ನು ಶೇ.15 ರ ಬಡ್ಡಿ ಜತೆ ಸೇರಿಸಿ ಒಟ್ಟು 10.66 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು. ಆದರೆ, ಇದುವರೆಗೂ ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣ ಸ್ವಾಧೀನಾಧಿಕಾರಿ ಹಾಗೂ ಕಾರವಾರ ಉಪವಿಭಾಗಾಧಿಕಾರಿ ಅವರ ವಾಹನ, ಕಾರವಾರ ಜಿಲ್ಲಾಧಿಕಾರಿ ಅವರ ವಾಹನ ಹಾಗೂ ಭೂ ಸ್ವಾಧೀನಾಧಿಕಾರಿ ಕಚೇರಿಯ ಸ್ಥಿರಾಸ್ತಿಗಳನ್ನು ಜಪ್ತು ಮಾಡುವಂತೆ ನ್ಯಾಯಾಲಯ ಅಮಲ ಬಚಾವಣೆ ಆದೇಶ ಜಾರಿ ಮಾಡಿತ್ತು.

ಡಿಸಿ ಕಾರು ಜಪ್ತಿಗೂ ವಾರಂಟ್
ಇನ್ನೊಂದು ಪ್ರಕರಣದಲ್ಲಿ ಸಿದ್ದರ ಗ್ರಾಮದಲ್ಲಿ 2013 ರಲ್ಲಿ ಸಂತೋಷ ರಾಣೆ ಅವರ ಜಮೀನನ್ನು ಹೆಸ್ಕಾಂ ಗ್ರಿಡ್ ಮಾಡುವ ಸಲುವಾಗಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿರುವ ಕಾರವಾರ ಎಸಿ ವಶಕ್ಕೆ ಪಡೆದಿದ್ದರು. ಅದಕ್ಕೆ ಪರಿಹಾರ ನೀಡುವ ಸಂದರ್ಭದಲ್ಲೂ ಆದಾಯ ತೆರಿಗೆ ಕಡಿತ ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ರಾಣೆ ಅವರು ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿ ತಮ್ಮ ಪರ ತೀರ್ಪು ಪಡೆದುಕೊಂಡಿದ್ದರು.
ಕಡಿತ ಮಾಡಿದ ಆದಾಯ ತೆರಿಗೆ ಹಣ 7.94 ಲಕ್ಷ ರೂ ಹಾಗೂ ಬಡ್ಡಿ 2.38 ಲಕ್ಷ ರೂ. ಸೇರಿ ಒಟ್ಟು 10.33 ಲಕ್ಷ ರೂ.ಗಳನ್ನು ಕಾರವಾರ ಎಸಿ ಕಚೇರಿ ಪಾವತಿಸದ ಕಾರಣ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಎಸಿ ಕಚೇರಿಯ ಆಸ್ತಿ ಹಾಗೂ ವಾಹನಗಳನ್ನು ಜಪ್ತು ಮಾಡಲು ಅಮಲ ಬಚಾವಣೆ ಆದೇಶ ಹೊರಡಿಸಿತ್ತು. ಆದರೆ, ಮಧ್ಯಾಹ್ನದ ಊಟದ ಹೊತ್ತಿಗೆ ಎಸಿ ಕಚೇರಿ ಬಾಗಿಲು ಹಾಕಿದ್ದರಿಂದ ಜಪ್ತು ಪ್ರಕ್ರಿಯೆ ಕೈಬಿಡಲಾಯಿತು.


ಯಾವುದೇ ಕಚೇರಿ ಆಸ್ತಿ ಜಪ್ತಿಗೂ ಮುನ್ನ ನೋಟಿಸ್ ನೀಡಿ, 1 ತಿಂಗಳು ಕಾಲಾವಕಾಶ ನೀಡಬೇಕು. ಆದರೆ, ಸೀಬರ್ಡ್ ವಿಶೇಷ ಭೂ ಸ್ವಾಧಿನಾಧಿಕಾರಿ ಕಚೇರಿಯ ಆಸ್ತಿ ಜಪ್ತಿನ ಸಂಬಂಧ ನಮಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ. ಇನ್ನು ಸಿದ್ದರ ಭೂ ಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿ ಎಸಿ ಕಚೇರಿ ಆಸ್ತಿ ಜಪ್ತಿನ ಸಂಬಂಧ ಇಂದು ನ್ಯಾಯಾಲಯದಲ್ಲಿ ವಿಚಾರಣೆ ಇತ್ತು. ಅದಕ್ಕೂ ಪೂರ್ವದಲ್ಲೇ ಆಸ್ತಿ ಜಪ್ತಿಗೆ ಮುಂದಾಗಲಾಗಿದೆ. ನ್ಯಾಯಾಲಯ ಎರಡೂ ಜಪ್ತು ಆದೇಶಗಳನ್ನು ಹಿಂಪಡೆದಿದೆ. ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಪರಿಹಾರ ಹಣವನ್ನು ಭರಣ ಮಾಡಲಾಗಿದೆ.
ವಿಜಯಲಕ್ಷ್ಮೀ ರಾಯಕೋಡ
ಎಸಿ ಕಾರವಾರ
.....