ಚಾಮರಾಜನಗರ: ಜಿಲ್ಲೆಯಲ್ಲಿ ಜಾನಪದಕ್ಕೆ ತಮ್ಮ ಕೃತಿಗಳ ಮೂಲಕ ಹೊಸ ಮೆರುಗನ್ನು ನೀಡಿದ ಹಿರಿಯ ಸಾಹಿತಿ ಮಂಜು ಕೋಡಿಉಗನೆ ಅವರ ಅಭಿನಂದನಾ ಗ್ರಂಥ ‘ಕಾರಣ್ಯದ ಕಡಲು’ ಅನಾವರಣಗೊಳ್ಳಲು ಸಿದ್ಧವಾಗಿದೆ.
ಚಾಮರಾಜನಗರದ ಹಿರಿಯ ಸಾಹಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಿಸಲವಾಡಿ ಸೋಮಶೇಖರ್ ಪ್ರಧಾನ ಸಂಪಾದಕರಾಗಿ, ಸಾಹಿತಿ ಬಿ.ಮಹೇಶ್ ಹರವೆ ಸಂಪಾದಕರ ನೇತೃತ್ವದಲ್ಲಿ ಸೊಬಗು, ಮೆರುಗು, ಬೆಡಗು ಹಾಗೂ ಬೆರಗು ಎಂಬ ನಾಲ್ಕೂ ವಿಭಾಗದಲ್ಲಿ ಹಿರಿಯ ಮತ್ತು ಕಿರಿಯ ಲೇಖಕರು, ರಂಗಕರ್ಮಿಗಳು, ಪತ್ರಕರ್ತರು ಹಾಗೂ ಸಂಸ್ಕೃತಿ ಚಿಂತಕರು ಬರೆದಿರುವ 20 ಕ್ಕಿಂತಲೂ ಹೆಚ್ಚು ಮೌಲ್ಯಯುತ ಲೇಖಲನಗಳನ್ನು ಈ ಗ್ರಂಥ ಒಳಗೊಂಡಿದೆ. ಕೃತಿಯೂ ಸಾಹಿತಿ ಮಂಜುಕೋಡಿಉಗನೆ ಅವರ ಬದುಕು, ಬರಹ ಹಾಗೂ ಸಾಧನೆಗಳನ್ನು ಕಟ್ಟಿಕೊಟ್ಟಿದ್ದು, ಅವರ ಕಾವ್ಯ, ಕಥಾ ಸಂಕಲನ ಹಾಗೂ ಕಾದಂಬರಿಯನ್ನು ಕುರಿತಾದ ವಿಮರ್ಶೆಗಳನ್ನು ಒಳಗೊಂಡಿದೆ. ಛಾಯಾಚಿತ್ರಗಳು ಕೂಡ ಅವರ ಜೀವನ ಮತ್ತು ಸಾಧನೆಯನ್ನು ತಿಳಿಸಿಕೊಡುತ್ತದೆ. ಅದರ ಜತೆಗೆ ಜಿಲ್ಲೆಯ ಜನಪದ, ಪತ್ರಿಕೋದ್ಯಮ, ರಂಗಭೂಮಿ, ದಲಿತ ಚಳುವಳಿ ಹಾಗೂ ಹಲವಾರು ಇತಿಹಾಸವನ್ನು ಸಾರುತ್ತದೆ.
ಇಂದು ಗ್ರಂಥ ಬಿಡುಗಡೆ:
ಚೇತನ ಕಲಾವಾಹಿನಿ, ಜಿಲ್ಲಾ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಹಾಗೂ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಸಹಯೋಗದಲ್ಲಿ ಮೇ 31 ರಂದು ಕಾರುಣ್ಯ ಕಡಲು ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬೆಳಗ್ಗೆ 10.30 ಗಂಟೆಗೆ ಪ್ರಾರಂಭವಾಗಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸುವರು. ವಿಮರ್ಶಕ ಎಸ್.ಆರ್.ವಿಜಯಶಂಕರ್ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಕಾರ್ಯಕ್ರಮ ಉದ್ಘಾಟಿಸುವರು. ಅಪರ ಜಿಲ್ಲಾಧಿಕಾರಿ ಗೀತಾ ಹುಡೇದಾ, ಸಾಹಿತಿ ಸಿ.ಮಂಜುನಾಥ ಪ್ರಸನ್ನ (ಮಂಜು ಕೋಡಿಉಗನೆ), ಕೃತಿ ಸಂಪಾದಕ ಸೋಮಶೇಖರ ಬಿಸಲವಾಡಿ, ಸಾಹಿತಿ ಬಿ.ಮಹೇಶ್ ಹರವೆ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಂ.ಸೋಮಣ್ಣ, ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ನರೇಂದ್ರನಾಥ್, ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಮಹದೇವಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರುಣ್ಯ ಕಡಲು ಅಭಿನಂದನಾ ಗ್ರಂಥ, ಹಿರಿಯ ಸಾಹಿತಿ ಮಂಜು ಕೋಡಿಉಗನೆ ಅವರ ಬದುಕು, ಕೃತಿಗಳು ಹಾಗೂ ಜಿಲ್ಲೆಯ ಸಂಕ್ಷಿಪ್ತಮಾಹಿತಿಯನ್ನು ಒಳಗೊಂಡಿದೆ. ಸಾಕಷ್ಟು ನೈಜತೆಯನ್ನು ಕಟ್ಟಿಕೊಡುವಲ್ಲಿ ಮಹತ್ವದ ಕೃತಿಯಾಗಿದೆ.
-ಬಿಸಲವಾಡಿ ಸೋಮಶೇಖರ್, ಕೃತಿಯ ಪ್ರಧಾನ ಸಂಪಾದಕ ಮತ್ತು ಹಿರಿಯ ಸಾಹಿತಿ, ಚಾಮರಾಜನಗರ