ಚಿತ್ರದುರ್ಗ: ಮಾಜಿ ಡಿಸಿಎಂ ಗೋವಿಂದ ಎಂ.ಕಾರಜೋಳ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅತ್ಯುತ್ತ್ತಮ ಅಭ್ಯರ್ಥಿ. ಅದಕ್ಕಾಗಿಯೇ ಬಿಜೆಪಿ ಆಯ್ಕೆ ಮಾಡಿತ್ತು. ಆದರೆ, ಅವರ ಗೆಲುವು ಸ್ವ-ಪಕ್ಷೀಯ ಕೆಲ ನಾಯಕರಿಗೆ ಇಷ್ಟವಿರಲಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ದೂರಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರಜೋಳ ಅವರು ಗೆದ್ದರೆ, ಪ್ರತಿಯೊಂದಕ್ಕೂ ಅವರ ಬಳಿ ಹೋಗಬೇಕಾಗುತ್ತದೆ ಸೇರಿ ಇನ್ನಿತರೆ ಕಾರಣದಿಂದಾಗಿ ಪ್ರಚಾರದಿಂದ ದೂರು ಉಳಿದಿದ್ದರು ಎಂದು ಯಾರ ಹೆಸರು ಪ್ರಸ್ತಾಪಿಸದೆ ದೂರಿದರು.
ಬಿಜೆಪಿ, ಜೆಡಿಎಸ್, ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ಚುನಾವಣೆಯ ಗೆಲುವಿನಲ್ಲಿ ನಿಜಕ್ಕೂ ಹೆಚ್ಚಿನ ಪಾತ್ರ ವಹಿಸಿದ್ದು ಎಂದರು.
ಬಿಜೆಪಿಯ ಬಹುತೇಕ ಸ್ಥಳೀಯ ನಾಯಕರ ಪಾತ್ರ ಲೋಕಸಭಾ ಚುನಾವಣೆಯಲ್ಲಿ ಇಲ್ಲ. ರಾಜಕೀಯ ಲಾಭ ಪಡೆಯುವ ಮುಖಂಡರ‌್ಯಾರೂ ಸರಿಯಾಗಿ ಕೆಲಸ ಮಾಡಿಲ್ಲ. ಮಾಡಿದ್ದರೆ, 2 ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಬೇಕಿತ್ತು. ಮತದಾನ ದಿನಾಂಕ ಹತ್ತಿರವಾದಂತೆ ಅಸಲಿ ಸತ್ಯ ಅಭ್ಯರ್ಥಿಗೂ ಮನವರಿಕೆ ಆಗಿದೆ ಎಂದು ಹೇಳಿದರು.
ಕಾರ್ಯಕರ್ತರ ಶ್ರಮಕ್ಕೆ ಫಲ ಸಿಕ್ಕಿದ ಸಂತೋಷ ನಮ್ಮಲ್ಲಿದೆ. ಆದರೆ, ಗೆದ್ದ ನಂತರ ಪಕ್ಷ ದ್ರೋಹಿಗಳನ್ನು, ಕುತಂತ್ರಿಗಳನ್ನು ಉಚ್ಛಾಟಿಸಿ ಶಿಸ್ತು ಕಾಯ್ದುಕೊಂಡರೆ ಉತ್ತಮ ಎಂದು ಅಭಿಪ್ರಾಯಪಟ್ಟರು.
ಕಾರಜೋಳ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವ ವಿಶ್ವಾಸವಿದೆ. ಮದಕರಿನಾಯಕ ಥೀಮ್ ಪಾರ್ಕ್ ಆಗಬೇಕು. ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಗೋಪಾಲಸ್ವಾಮಿ ನಾಯಕ, ತಿಮ್ಮಣ್ಣ, ಪ್ರತಾಪ್ ಜೋಗಿ, ಮಠದಹಟ್ಟಿ ವೀರಣ್ಣ ಇತರರಿದ್ದರು.