ಬೀದರ್: ಜಿಲ್ಲೆಯ ಕಾರಂಜಾ ಜಲಾಶಯ ಭರ್ತಿಯಾಗಿದೆ. 2016ರ ಬಳಿಕ ಜಲಾಶಯ ತುಂಬುತ್ತಿದೆ. ಜಲಾಶಯವು ಒಟ್ಟು 7.69 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಗುರುವಾರ ಬೆಳಗ್ಗೆ 11 ಗಂಟೆ ವೇಳೆಗೆ 7.45 ಟಿಎಂಸಿ ನೀರು ಸಂಗ್ರಹವಾಗಿದೆ. 19 ಸಾವಿರ ಕ್ಯೂಸೆಕ್ ಗೂ ಅಧಿಕ ನೀರಿನ ಒಳಹರಿವಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಇನ್ನೂ ಮಳೆ ಮುಂದುವರಿದ ಕಾರಣ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಗುರುವಾರ ಬೆಳಗ್ಗಿನ ಜಾವ ಜಲಾಶಯದ ಗೇಟ್ ತೆರೆದು ನದಿಗೆ ನೀರು ಬಿಡಲಾಗುತ್ತಿದೆ. ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಕಾರಂಜಾ ಯೋಜನೆ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಗೇಟ್ ತೆರೆದು ನೀರು ಬಿಟ್ಟರೆ ಮಾಂಜ್ರಾ ನದಿ ಸೇರಲಿದ್ದು, ಪ್ರವಾಹ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆಗಳಿವೆ. ಕಾರಂಜಾ ಜಲಾಶಯ ಸೆಪ್ಟೆಂಬರ್ ಮೊದಲ ವಾರದವರೆಗೆ ನೀರಿಲ್ಲದೆ ಭಣಗುಡುತ್ತಿತ್ತು. ಆದರೆ ಸೆ. 15ರಿಂದ ನಾಲ್ಕು ದಿನ ಅತಿವೃಷ್ಟಿಯಾಗಿ ಜಲಾಶಯಕ್ಕೆ 4 ಟಿಎಂಸಿಯಷ್ಟು ನೀರು ಹರಿದುಬಂದಿತ್ತು. ಇದೀಗ ಮತ್ತೆ ಮಳೆಯಾಗುತ್ತಿದ್ದರಿಂದ ಕಳೆದ 24 ಗಂಟೆಯಲ್ಲೇ 1.5 ಟಿಎಂಸಿ ನೀರು ಬಂದಿದೆ. ಮಂಗಳವಾರ ಬೆಳಗ್ಗೆ ಜಲಾಶಯದಲ್ಲಿ 5 ಟಿಎಂಸಿ ನೀರಿತ್ತು. ಬುಧವಾರ ಸಂಜೆಗೆ ಇದು 6.2 ಟಿಎಂಸಿಗೇರಿದೆ. ಗುರುವಾರ ಬೆಳಗ್ಗೆ ಶೇ.96ರಷ್ಟು ಭರ್ತಿಯಾಗಿದೆ. ಜಲಾಶಯದ ಭರ್ತಿಯಾದ ಕಾರಣ ಹಿನ್ನೀರಿನಿಂದ ಹುಮನಾಬಾದ್, ಬೀದರ್ ತಾಲೂಕಿನ ಹಲವು ಗ್ರಾಮಸ್ಥರು ಸಂಕಷ್ಟ ಎದುರಾಗಿದೆ. ಕೆಲ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆಗಳಿರುವ ಕಾರಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಾರೆ.