ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಹಿಂಪಡೆಯುವ ತನಕ ಶಾಂತಿಯುತ ಹೋರಾಟದಿಂದ ಹಿಂಜರಿಯುವುದಿಲ್ಲ.ಇದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬುಧವಾರ ನಗರದ ಹೊರವಲಯದ ಅಡ್ಯಾರ್‌ನ ಶಹಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಹೋರಾಟಗಾರರ ಒಕ್ಕೊರಲ ಧ್ವನಿ. ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಹಿಂದೂಸ್ಥಾನವನ್ನು ಹಿಂದು ರಾಷ್ಟ್ರವನ್ನಾಗಿಸುವ ಹುನ್ನಾರ ಕೇಂದ್ರ ಸರ್ಕಾರದ್ದು. ಗಾಂಧೀಜಿಯ ಅಸಹಕಾರ ಚಳವಳಿ ಮಾದರಿಯಲ್ಲಿ ನಾವು ಪ್ರತಿಭಟಿಸಬೇಕಾಗಿದೆ. ನಾವು ಹಿಂಸೆ ಬಯಸುವುದಿಲ್ಲ. ಸರ್ಕಾರವೇ ಪ್ರಚೋದನೆ ನೀಡಿ ಹಿಂಸಾಚಾರ ನಡೆಸುತ್ತಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಹರ್ಷ ಮಂದರ್ ಹೇಳಿದರು.
ಇನ್ನೋರ್ವ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಮಾತನಾಡಿ, ಜನರನ್ನು, ಮಾಧ್ಯಮ, ನ್ಯಾಯಾಂಗ ವ್ಯವಸ್ಥೆಯನ್ನು ಹೆದರಿಸಿ ತಮಗೆ ಬೇಕಾದಂತೆ ಬಳಸಿಕೊಳ್ಳಬಹುದು ಎನ್ನುವ ದುರಹಂಕಾರ ಕೇಂದ್ರ ಸರ್ಕಾರಕ್ಕಿತ್ತು. ಆದರೆ ಈಗ ಜನ ತಾಳ್ಮೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದ ಅಮಿತ್ ಷಾ ಎರಡಡಿ ಅಡಿ ಹಿಂದಕ್ಕೆ ಹೋಗಿದ್ದಾರೆ ಎಂದರು.
ನಾವು ದೇಶದ ಮಾಲೀಕರು. ರಾಷ್ಟ್ರಪತಿ, ಪ್ರಧಾನಿ, ಎಸ್‌ಪಿ, ಡಿಸಿ ನಮ್ಮ ಸೇವಕರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಹಿಂಸಾಚಾರ ನಡೆಯುತ್ತಿದೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಶಿಸ್ತನ್ನು ಉಲ್ಲಂಘಿಸುತ್ತಿದ್ದಾರೆ. ನಾಗ್ಪುರ ಹಾಗೂ ಕಲ್ಲಡ್ಕ ರಿಪಬ್ಲಿಕ್‌ನ ಆದೇಶ ಜಾರಿಗೊಳಿಸಿದಾಗ ಗೋಲಿಬಾರ್‌ನಂಥ ಘಟನೆಗಳು ನಡೆಯುತ್ತವೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್ ಹೇಳಿದರು.
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಖಾಜಿ ಅಲ್‌ಹಾಜ್ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಉಡುಪಿ ಜಿಲ್ಲಾ ಖಾಜಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸಿದರು. ವಕೀಲ ಸುಧೀರ್ ಕುಮಾರ್ ಮರೋಳಿ, ಸುನ್ನಿ ಯುವಜನ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಅಬ್ದುಲ್ ರಶೀದ್ ಝೈನಿ, ಸಮಸ್ತ ಮುಶಾವರಾ ರಾಜ್ಯ ಕಾರ್ಯದರ್ಶಿ ಯು.ಕೆ.ಅಬ್ದುಲ್ ಅಝೀಜ್, ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ಜಮಾಅತೆ ಇಸ್ಲಾಮಿ ಹಿಂದ್ ಮುಹಮ್ಮದ್ ಕುಂಞಿ, ಎಸ್‌ಕೆಎಸ್‌ಎಂ ದಾವಾ ಕಾರ್ಯದರ್ಶಿ ಎಂ.ಜಿ.ಮುಹಮ್ಮದ್, ಯುನಿವೆಫ್ ರಾಜ್ಯಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿದರು.
ಹ್ಯುಮ್ಯಾನಿಟಿ ಫೋರಂ ಮಾಧ್ಯಮ ವಿಭಾಗ ಸಂಚಾಲಕ ಉಮರ್ ಯು.ಎಚ್. ಹಕ್ಕೊತ್ತಾಯ ಮಂಡಿಸಿದರು. ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಸ್ವಾಗತಿಸಿದರು. ಬಿ.ಎಂ.ಮುಮ್ತಾಝ್ ಅಲಿ ವಂದಿಸಿದರು.
ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಯು.ಟಿ.ಖಾದರ್, ಮಾಜಿ ಶಾಸಕ ಮೊದೀನ್ ಬಾವ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಹರೀಶ್ ಕುಮಾರ್, ಪ್ರಮುಖರಾದ ವೈ.ಅಬ್ದುಲ್ಲ ಕುಂಞಿ, ಯು.ಕೆ.ಮೋನು ಕಣಚೂರು, ಎಸ್.ಎಂ.ರಶೀದ್, ಮುಹಮ್ಮದ್ ಹನೀಫ್, ಸೆಯ್ಯದ್ ಅಹ್ಮದ್ ಭಾಷಾ ತಂಗಳ್, ಮನ್ಸೂರ್ ಅಹ್ಮದ್ ಅಝಾದ್, ಮುಹಮ್ಮದ್ ಇಲ್ಯಾಸ್ ತುಂಬೆ, ಸಿ.ಮುಹಮೂದ್, ಭಾಷಾ ಸಾಹೇಬ್ ಕುಂದಾಪುರ, ಇಮ್ತಿಯಾಝ್ ಕಾರ್ಕಳ. ಕೆ.ಎಸ್.ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.
ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.
--- ಬಾಕ್ಸ್ ---
ಬಿಗುಭದ್ರತೆ ನಡುವೆ ಸಮಾವೇಶ
ಪ್ರತಿಭಟನಾ ಸಮಾವೇಶ ಪೊಲೀಸ್ ಬಿಗು ಭದ್ರತೆ ನಡುವೆ ನಡೆಯಿತು. ಮಂಗಳೂರಿನಲ್ಲಿ ಪಂಪ್‌ವೆಲ್‌ನಿಂದ ಆರಂಭಗೊಂಡು, ನಾಗುರಿ ಪಡೀಲ್ ಜಂಕ್ಷನ್, ಕಣ್ಣೂರು, ಅಡ್ಯಾರ್, ವಳಚ್ಚಿಲ್, ಅರ್ಕುಳ, ಫರಂಗಿಪೇಟೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಮಾವೇಶ ನಡೆದ ಅಡ್ಯಾರ್ ಕಣ್ಣೂರಿನಲ್ಲಿ ಪ್ರತಿ ಹೆಜ್ಜೆಗೂ ಪೊಲೀಸರಿದ್ದರು, ಜಲಫಿರಂಗಿ ವಾಹನ, 10ರಷ್ಟು ಕ್ಷಿಪ್ರ ಕಾರ್ಯಪಡೆ ವಾಹನಗಳು, ಜತೆಗೆ 5 ಅಗ್ನಿಶಾಮಕ ವಾಹನಗಳನ್ನು ಸನ್ನದ್ಧವಾಗಿ ನಿಂತಿದ್ದವು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಒಂದು ಸಾವಿರಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದರು. ಬೆಳಗ್ಗಿನಿಂದಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಪಡೀಲ್‌ನಿಂದಲೇ ಫರಂಗಿಪೇಟೆ ವರೆಗೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಮಂಗಳೂರಿನಲ್ಲೂ ಬಂದರು ಹಾಗೂ ಸೆಂಟ್ರಲ್ ಮಾರುಕಟ್ಟೆಯಲ್ಲಿ ಮುಸ್ಲಿಂ ಸಮುದಾಯದವರ ಅಂಗಡಿಗಳು ಮುಚ್ಚಿದ್ದವು.
---------
ಹರಿದು ಬಂದ ಜನಸಾಗರ:
ಬೆಳಗ್ಗೆ 11ರಿಂದಲೇ ಜನ ಮೈದಾನದತ್ತ ಆಗಮಿಸುತ್ತಿದ್ದರು. 2 ಗಂಟೆಯ ವೇಳೆಗೆ ಹೆದ್ದಾರಿ ಜನರಿಂದ ತುಂಬಿತ್ತು. ಸಾಯಂಕಾಲ 4 ಗಂಟೆವರೆಗೂ ಜನಪ್ರವಾಹವಿತ್ತು. ಕಾರ್ಯಕರ್ತರನ್ನೂ ಸಂಚಾರ ನಿಯಂತ್ರಣಕ್ಕೆ ನಿಯೋಜಿಸಲಾಗಿತ್ತು. ಪಾವೂರು ಕಡೆಯಿಂದ ದೋಣಿಯ ಮೂಲಕ ನೇತ್ರಾವತಿ ನದಿ ದಾಟಿ ನೂರಾರು ಮಂದಿ ಸಮಾವೇಶಕ್ಕೆ ಬಂದಿದ್ದರು. ಸಮಾವೇಶ ಮೈದಾನ ತುಂಬಿದ್ದರಿಂದ ಒಳ ಪ್ರವೇಶಿಸಲು ಸಾಧ್ಯವಾಗದೆ ಸಾವಿರಾರು ಮಂದಿ ರಸ್ತೆಯಲ್ಲೇ ನಿಲ್ಲಬೇಕಾಯಿತು.
--------
ರಾಷ್ಟ್ರಧ್ವಜದೊಂದಿಗೆ ಆಜಾದಿ ಘೋಷಣೆ:
ಆಜಾದಿ ಘೋಷಣೆ ಸಮಾವೇಶದ ತುಂಬೆಲ್ಲ ಕೇಳಿ ಬರುತ್ತಿತ್ತು. ರಾಷ್ಟ್ರಧ್ವಜದ ಹೊರತು ಇತರ ಯಾವುದೇ ಧ್ವಜಗಳಿಗೆ ಅವಕಾಶ ಇರಲಿಲ್ಲ. ಮೆರವಣಿಗೆಯಲ್ಲಿ ಹಲವು ಮೀಟರ್‌ಗಳಷ್ಟು ಉದ್ದದ ರಾಷ್ಟ್ರಧ್ವಜ ತರಲಾಯಿತು. ಎನ್‌ಆರ್‌ಸಿ , ಸಿಎಎ, ವಿರೋಧಿ ಬರಹಗಳಿರುವ ಹಾಗೂ ಆಜಾದಿ ಎಂದು ಬರೆದಿರುವ ಟಿ-ಶರ್ಟ್‌ಗಳ ಭರಾಟೆ ಜೋರಾಗಿತ್ತು.
---------
* ಕಮಿಷನರ್ ಟಾರ್ಗೆಟ್:
ಪ್ರತಿಭಟನೆಗೆ ಆಗಮಿಸಿದ ಜನರು ಹಿಡಿದುಕೊಂಡಿದ್ದ ಪ್ಲೇಕಾರ್ಡ್‌ಗಳಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಮತ್ತು ಪೊಲೀಸರೇ ಟಾರ್ಗೆಟ್ ಆಗಿದ್ದರು. ‘ಕಮಿಷನರ್ ಅಂದರೆ ಜನರನ್ನು ಕೊಲ್ಲುವ ಕಮಿಷನ್ ದಂಧೆ ಅಲ್ಲ’, ‘ಜೈಲಲ್ಲಿರಬೇಕಾದ ಹರ್ಷ ಮಂಗಳೂರಿನ ಜೈಲ್ಲಲ್ಲಿ’, ‘ಕುಂಬಾರನಿಗೆ ವರ್ಷ, ಹರ್ಷನಿಗೆ ನಿಮಿಷ, ತಣಿಯದು ನಮ್ಮ ಆಕ್ರೋಶ’ ಈ ಮೊದಲಾದ ಬರಹಗಳು ರಾರಾಜಿಸಿದವು. ಗೋಲಿಬಾರ್‌ನಲ್ಲಿ ಇಬ್ಬರ ಸಾವಿಗೆ ಕಮಿಷನರ್ ಡಾ.ಹರ್ಷ, ಇನ್‌ಸ್ಪೆಕ್ಟರ್‌ಗಳಾದ ಶಾಂತರಾಮ್ ಕುಂದರ್ ಮತ್ತು ಶರೀಫ್ ಅವರೇ ಕಾರಣ ಎಂದು ವಕೀಲ ಸುಧೀರ್ ಕುಮಾರ್ ಮರೋಳಿ ಆರೋಪಿಸಿದರು. ಪ್ರತಿಭಟನಾ ವೇದಿಕೆಗೆ ಶಹೀದ್ ಅಬ್ದುಲ್ ಜಲೀಲ್ ಕಂದಕ್ ಮತ್ತು ನೌಶೀನ್ ಕುದ್ರೋಳಿ ಹೆಸರನ್ನಿಡಲಾಗಿತ್ತು.
----------
* ಭಾಗವಹಿಸದ ಮುಸ್ಲಿಂ ಮಹಿಳೆಯರು:
ಮುಸ್ಲಿಂ ಸೆಂಟ್ರಲ್ ಕಮಿಟಿ ಕರೆಯಂತೆ ಮುಸ್ಲಿಂ ಮಹಿಳೆಯರು ಸಭೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಕಾಂಗ್ರೆಸ್‌ನ ಕಾರ್ಯಕರ್ತೆಯರ ಸಹಿತ ಇತರ ಸಮುದಾಯದ ಮಹಿಳೆಯರು ಬೆರಳೆಣಿಕೆ ಸಂಖ್ಯೆಯಲ್ಲಿದ್ದರು. ಸಮಾವೇಶ ಮೈದಾನದ ಪಕ್ಕದ ಕಟ್ಟಡಗಳಲ್ಲಿಂದ ಮುಸ್ಲಿಂ ಮಹಿಳೆಯರು ಕಾರ್ಯಕ್ರಮ ವೀಕ್ಷಿಸಿದರು.
--- ಫೋಟೋ ---
* ಎಂಎನ್‌ಜಿ 15 ಜನವರಿ ಅಡ್ಯಾರ್ ಪ್ರೊಟೆಸ್ಟ್:
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರು ಹೊರವಲಯದ ಅಡ್ಯಾರ್ ಸಮೀಪದ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದರು.