ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧ ಕುರಿತು ನಿಷೇಧಾಧಿಕಾರಿಗಳಿಗೆ ಕ್ರಮಬದ್ದ ಕಾರ್ಯವಿಧಾನ ತರಬೇತಿ ಕಾರ್ಯಾಗಾರವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಎಸ್ಪಿ ಜಯಪ್ರಕಾಶ ಹಕ್ಕರಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್ ಇದ್ದರು. 
ಜಿಲ್ಲೆ

ಕಾಯ್ದೆ ಸಮರ್ಪಕ ಅನುಷ್ಠಾನಗೊಳಿಸಿ

ಬಾಗಲಕೋಟೆ: ಸಮಾಜದ ಪಿಡುವಾಗಿ ಪರಿಣಮಿಸಿದ ಬಾಲ್ಯವಿವಾಹ ತಡೆಗೆ ಸರ್ಕಾರ ಜಾರಿಗೆ ತಂದ ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧ ಕುರಿತು ನಿಷೇಧಾಧಿಕಾರಿಗಳಿಗೆ ಕ್ರಮಬದ್ದ ಕಾರ್ಯವಿಧಾನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯವಿವಾಹಕ್ಕೆ ಮುಖ್ಯವಾಗಿ ಬಡತನ ಕಾರಣವಾಗಿದೆ. ನಿಗದಿತ ವಯಸ್ಸಿನ ಪೂರ್ವದಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದಲ್ಲಿ ಅವರ ಆರೋಗ್ಯದ ಮೇಲೆ ದುಷ್ಪಪರಿಣಾಮ ಬೀರುತ್ತದೆ. ಅವರು ಮಾನಸಿಕ ದೌರ್ಬಲ್ಯತೆಗೆ ಒಳಗಾಗುವದರ ಜೊತೆಗೆ ಖಿನ್ನತೆ, ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಾರೆ. ಆದ್ದರಿಂದ ಇದನ್ನು ತಡೆಯುವಲ್ಲಿ ನಿಷೇಧಾಽಕಾರಿಗಳು ಪ್ರತಿಯೊಂದು ಹಂತದಲ್ಲಿಯೂ ತಮ್ಮ ಜವಾಬ್ದಾರಿಯನ್ನು ಅರಿವು ಕಾರ್ಯನಿರ್ವಹಿಸಬೇಕಿದೆ. ತಿಳುವಳಿಕೆ ಇದ್ದರೂ ಸಹ ಬಾಲ್ಯವಿವಾಹಕ್ಕೆ ಮುಂದಾಗುತ್ತಿದ್ದು, ಸೂಕ್ತ ತಿಳುವಳಿಕೆ ಕೊಡುವ ಮೂಲಕ ಪಿಡುಗನ್ನು ತಡೆದು ಹಾಕಲು ಮುಂದಾಗಬೇಕು ಎಂದರು.
ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಮಾತನಾಡಿ, ಬಾಲ್ಯವಿವಾಹದ ಬಗ್ಗೆ ಮಾಹಿತಿ ದೊರೆತಲ್ಲಿ ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಬಾಲ್ಯವಿವಾಹ ನಿಷೇಧ ಕಾಯ್ದೆಯ ಬಗ್ಗೆ ಎಲ್ಲರಿಗೂ ತಿಳುವಳಿಕೆ ಇದೆ. ಆದರೆ ಬಾಲ್ಯವಿವಾಹಗಳು ಇನ್ನು ನಡೆಯುತ್ತಿರುವುದು ವಿಷಾಧನೀಯ ಸಂಗತಿ. ಜನರಲ್ಲಿ ಕೇವಲ ಅರಿವು ಮೂಡಿಸುವುದು ಮುಖ್ಯವಲ್ಲ ಕ್ರಮ ಜರುಗಿಸಬೇಕು. ಅಂದಾಗ ಮಾತ್ರ ಜನರಲ್ಲಿ ಕಾಯ್ದೆಯ ಬಗ್ಗೆ ಭಯ ಹುಟ್ಟುತ್ತದೆ. ಪ್ರತಿಯೊಂದು ಕಾರ್ಯಕ್ರಮದಲ್ಲಿ ನಿಷೇಧ ಕಾಯ್ದೆಯ ಬಗ್ಗೆ ಘೋಷಣೆಗಳು ಕೂಗುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ಡಿವೈಎಸ್‌ಪಿ ಪ್ರಶಾಂತ, ತಹಸೀಲ್ದಾರ ವಿನಯ ಪಾಟೀಲ, ಸಂಪನ್ಮೂಲ ವ್ಯಕ್ತಿ ಹರಿಷ ಜೋಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.