ಶಿವಮೊಗ್ಗ: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ವಿುಕ ಕಾಯ್ದೆ, ವಿದ್ಯುಚ್ಛಕ್ತಿ ತಿದ್ದುಪಡಿ, ಪೆಟ್ರೋಲ್-ಡೀಸೆಲ್ ದರ ಏರಿಕೆ ಮಾಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನ, ರೈತ ಮತ್ತು ಕಾರ್ವಿುಕ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಶನಿವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಪ್ರತಿಭಟಿಸಿದ ನೂರಾರು ಕಾರ್ಯಕರ್ತರು, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಕರಲ್ಲದವರಿಗೆ ಭೂಮಿ ಖರೀದಿಸಲು ಅವಕಾಶ ಕಲ್ಪಿಸಿರುವುದರಿಂದ ಕೃಷಿ ಚಟುವಟಿಕೆಗೆ ಭಾರಿ ಧಕ್ಕೆ ಆಗಲಿದೆ. ಜತೆಗೆ ಗ್ರಾಮೀಣ ಅರ್ಥ ವ್ಯವಸ್ಥೆಗೆ ಹಿನ್ನಡೆಯಾಗಲಿದೆ. ಆದ್ದರಿಂದ ಈ ತಿದ್ದುಪಡಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರಕೃತಿದತ್ತವಾಗಿ ದೊರೆಯುತ್ತಿರುವ ಗಣಿಗಾರಿಕೆಯನ್ನು ಖಾಸಗಿಗೆ ಗುತ್ತಿಗೆ ನೀಡಲು ಕೇಂದ್ರ ಸರ್ಕಾರ ನಡೆಸುತ್ತಿರುವ ಹರಾಜು ಪ್ರಕ್ರಿಯೆ ಕೈಬಿಡಬೇಕು. ಕಾರ್ವಿುಕರ ಬೇಡಿಕೆಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರ ಕಾರ್ವಿುಕ ಕಾಯ್ದೆ ತಿದ್ದುಪಡಿ ಮಾಡದಂತೆ ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಪ್ರಸ್ತಾವನೆಯಂತೆ ರಾಜ್ಯ ಸರ್ಕಾರ ಮೂಲ ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಿರುವುದನ್ನು ಕೂಡಲೇ ಕೈಬಿಡಬೇಕು. ಬೇಡಿಕೆಗಳನ್ನು ತಕ್ಷಣ ಜಾರಿಗೆ ತರದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಜನಜಾಗೃತಿ ಚಳವಳಿ ನಡೆಸಲಾಗುವುದು ಎಂದು ಡಿಸಿ ಕೆ.ಬಿ.ಶಿವಕುಮಾರ್ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಬೇಳೂರು ಗೋಪಾಲಕೃಷ್ಣ, ಎಚ್.ಎಂ.ಚಂದ್ರಶೇಖರಪ್ಪ, ಜಿಪಂ ಉಪಾಧ್ಯಕ್ಷೆ ವೇದಾ ವಿಜಯ್ಕುಮಾರ್, ಸದಸ್ಯ ಕಲಗೋಡು ರತ್ನಾಕರ್, ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕುಮಾರಿ, ಎಸ್ಟಿ ಘಟಕದ ಜಿಲ್ಲಾಧ್ಯಕ್ಷೆ ಜಿ.ಪಲ್ಲವಿ, ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೌಗಂಧಿಕಾ, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಮಂಜುಳಾ ಶಿವಣ್ಣ, ಮೇಹಖ್ ಶರೀಫ್, ಮುಖಂಡರಾದ ಇಸ್ಮಾಯಿಲ್ ಖಾನ್, ಎಸ್.ಪಿ.ಶೇಷಾದ್ರಿ, ಕೆ.ರಂಗನಾಥ, ವಿಜಯಲಕ್ಷ್ಮೀ ಪಾಟೀಲ್, ಬಿ.ಆರ್.ಜಯಂತ್ ಇತರರಿದ್ದರು.
ರೈತರಿಗೆ ಮರಣ ಶಾಸನ: ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿ ಉಳುವವನ್ನೇ ಕೂಲಿ ಕಾರ್ವಿುಕನ್ನಾಗಿಸಲು ಹೊರಟಿದೆ. ಬಂಡವಾಳಶಾಹಿಗಳು ಹಾಗೂ ರಿಯಲ್ ಎಸ್ಟೇಟ್ ದಂಧೆಗೆ ಪ್ರೋತ್ಸಾಹಿಸುವ ಸರ್ಕಾರ ಮತ್ತೊಮ್ಮೆ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳ ಕೈಗೆ ಒಪ್ಪಿಸಲು ಮುಂದಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆರೋಪಿಸಿದರು.
ರೈತರಿಗೆ ಮರಣ ಶಾಸನವಾಗಿರುವ ಈ ಕಾಯ್ದೆ ತಿದ್ದುಪಡಿ ಅನುಷ್ಠಾನಗೊಂಡರೆ ರೈತನ ಊರುಗೋಲನ್ನು ಕಿತ್ತುಕೊಂಡು ಉಳ್ಳವನಿಗೆ ನೀಡಲಾಗುತ್ತದೆ. ಆದ್ದರಿಂದ ಈ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ವಿಧಾನಮಂಡಲದಲ್ಲಿ ಮಂಡಿಸಬಾರದೆಂದು ಒತ್ತಾಯಿಸಿದರು. ಕರೊನಾ ವೈರಸ್ ಹಾವಳಿ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ಸತತ 10 ದಿನಗಳಿಂದ ಏರುಗತಿಯಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಎಪಿಎಂಸಿ ವ್ಯವಸ್ಥೆ ದುರ್ಬಲ: ರಾಜ್ಯವ್ಯಾಪಿ ತೀವ್ರ ವಿರೋಧದ ನಡುವೆಯೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದು ಎಪಿಎಂಸಿ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಭವಿಷ್ಯದಲ್ಲಿ ರೈತರು ಕಾರ್ಪೆರೇಟ್ ಸಂಸ್ಥೆಗಳ ಕಪಿಮುಷ್ಟಿಯೊಳಗೆ ಸಿಲುಕುವುದಕ್ಕೆ ಮುನ್ನುಡಿ ಬರೆದಂತಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಶಿಕ್ಷಣ ನೀತಿಯ ಮಾರ್ಗಸೂಚಿ ಸ್ಪಷ್ಟವಾಗಿಲ್ಲದೇ ಪದೇಪದೆ ಇಚ್ಛಾನುಸಾರ ಆದೇಶಗಳನ್ನು ಹೊರಡಿಸುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರ ಮೇಲೆ ದುಷ್ಪರಿಣಾಮ ಉಂಟಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ದರ್ಬಾರ್ಗೆ ಕಡಿವಾಣ ಹಾಕಲು ಸರ್ಕಾರ ವಿಫಲವಾಗಿದೆ. ಸಮಗ್ರ ಶಿಕ್ಷಣ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಅಸಂವಿಧಾನಿಕ ಮಾರ್ಗದಲ್ಲಿ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮಾಡಿ ಖಾಸಗಿ ಉದ್ಯಮಿಗಳಿಗೆ ಅನುಕೂಲವಾಗುವ ಹಾಗೆ ಬಡವರಿಗೆ ಮಾರಕವಾಗುವ ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು. ಹಾಗೂ ಕೇಂದ್ರ ಸರ್ಕಾರ ಈ ಪ್ರಸ್ತಾವನೆ ಹಿಂಪಡೆಯಬೇಕು.
| ಆರ್.ಪ್ರಸನ್ನಕುಮಾರ್, ಎಂಎಲ್ಸಿ