ಜಿಲ್ಲೆ

ಕಾಯ್ದೆ ಅಂಗೀಕಾರವಾದರೆ ನೌಕರರಿಗೆ ಅನುಕೂಲ

ಚಿತ್ರದುರ್ಗ: ರಾಜ್ಯದ ವಿವಿಧೆಡೆ ಸೋಲಾರ್, ವಿಂಡ್‌ಮಿಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಕಾಯಂ, ಗುತ್ತಿಗೆ ನೌಕರರ ಅನುಕೂಲಕ್ಕಾಗಿ ಕಾರ್ಮಿಕ ಇಲಾಖೆ ಕಾಯ್ದೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದೆ. ಸಚಿವ ಸಂಪುಟದಲ್ಲಿ ಅಂಗೀಕಾರವಾದರೆ, ವಿವಿಧ ಸೌಲಭ್ಯ ದೊರೆಯಲಿದೆ ಎಂದು ಇಲಾಖೆಯ ದಾವಣಗೆರೆ ಸಹಾಯಕ ಆಯುಕ್ತ ಡಾ.ಅವಿನಾಶ್ ನಾಯ್ಕ ತಿಳಿಸಿದರು.

ರಾಜ್ಯ ಸೋಲಾರ್, ವಿಂಡ್ ಎನರ್ಜಿ ಎಂಪ್ಲಾಯ್ಸ್ ಯೂನಿಯನ್‌ನಿಂದ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶ, ಕಾರ್ಮಿಕ ಕಾಯ್ದೆ, ಹಕ್ಕುಗಳ ಕುರಿತ ಸಂವಾದದಲ್ಲಿ ಮಾತನಾಡಿದರು.

ವಿವಿಧ ರೀತಿಯ ಕಾರ್ಮಿಕರಿಗೆ ಸರ್ಕಾರ ಈಗಾಗಲೇ ಹಲವು ಕಾಯ್ದೆ ಜಾರಿಗೊಳಿಸಿದ್ದು, ಅದರಲ್ಲಿ ಕಾಯಂ, ಗುತ್ತಿಗೆ ನೌಕರರಿಗೆ ವೇತನ, ಕೆಲಸದ ಅವಧಿ, ಹಲವು ಸೌಲಭ್ಯ ಪಡೆಯಲಿಕ್ಕಾಗಿ ನಿಯಮ ರೂಪಿಸಿದೆ. ಕಂಪನಿಗಳ ಮಾಲೀಕರು ತಪ್ಪದೆ ನೀಡಬೇಕಿದೆ. ಇಲ್ಲದಿದ್ದರೆ, ಅಂತವರ ವಿರುದ್ಧ ಇಲಾಖೆ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರದ 21, ರಾಜ್ಯ ಸರ್ಕಾರದ 4 ಸೇರಿ 25 ಕಾಯ್ದೆಗಳಿವೆ. 1936ರಿಂದಲೇ ಕಾರ್ಮಿಕರಿಗೆ ವೇತನ ಕಾಯ್ದೆ ಜಾರಿಯಾಗಿದೆ. ಹಲವು ಬಾರಿ ತಿದ್ದುಪಡಿಯಾಗಿವೆ. ಆಡಳಿತ ಮಂಡಳಿ ಅಥವಾ ಗುತ್ತಿಗೆದಾರರಿಂದ ಏನಾದರೂ ತಾರತಮ್ಯ, ತೊಂದರೆಯಾದರೆ ಇಲಾಖೆ ಮಧ್ಯ ಪ್ರವೇಶಿಸಿ, ಸಮಸ್ಯೆ ಇತ್ಯರ್ಥ ಪಡಿಸಲು ಮುಂದಾಗಲಿದೆ ಎಂದು ತಿಳಿಸಿದರು.

ಕಾರ್ಮಿಕರಲ್ಲಿ ಕಾಯ್ದೆಗಳ ಕುರಿತು ಅರಿವಿರಬೇಕು. ಆಗ ಮಾತ್ರ ತಮ್ಮ ಹಕ್ಕನ್ನು ಕೇಳಿ ಪಡೆಯಬಹುದು. ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಅಗತ್ಯ ಮೂಲಸೌಕರ್ಯ ಇರಬೇಕು. ಮಾಲೀಕರು ನೀಡದಿದ್ದರೆ, ಇಲಾಖೆಗೆ ದೂರು ನೀಡಿದಲ್ಲಿ, ಕೊಡಿಸಲು ಅಧಿಕಾರಿಗಳು ನೆರವಾಗಲಿದ್ದಾರೆ. ಮೋಸ, ವಂಚನೆಗೆ ಒಳಗಾದರೆ, ಕಾರ್ಮಿಕ ನ್ಯಾಯಾಲಯದಿಂದ ನ್ಯಾಯ ಪಡೆಯಬಹುದು ಎಂದು ಸಲಹೆ ನೀಡಿದರು.

ಯೂನಿಯನ್‌ನ ವಿಜಯನಗರ ಜಿಲ್ಲಾಧ್ಯಕ್ಷ ವೀರೇಶ್ ನಾಯ್ಕ ಹಾರಕನಹಾಳ್ ಮಾತನಾಡಿ, ಇತ್ತೀಚೆಗೆ ಸೋಲಾರ್ ಹಾಗೂ ವಿಂಡ್ ಎನರ್ಜಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನೌಕರರು ಅಧಿಕವಾಗಿದ್ದು, 10 ಸಾವಿರ ಮಂದಿ ದುಡಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಂಖ್ಯೆ 30 ಸಾವಿರ ದಾಟಲಿದೆ ಎಂದರು.

ಸೋಲಾರ್-ವಿಂಡ್ ಎನರ್ಜಿಯಿಂದ 10 ಮೆ.ವ್ಯಾ ವಿದ್ಯುತ್ ಉತ್ಪಾದನೆಯಾದರೆ, ಮುಂದಿನ ದಿನದಲ್ಲಿ ಸರ್ಕಾರ ರಾಜ್ಯದ 4 ಕಡೆ ಉತ್ಪಾದನಾ ಘಟಕ ಆರಂಭಿಸಲು ಚಿಂತನೆ ನಡೆಸಿದೆ. ಈವರೆಗೂ ಸರ್ಕಾರಿ ಸಾಮ್ಯಕ್ಕೆ ಒಳಪಟ್ಟಿದ ಕೈಗಾರಿಕೆಗಳು ಮುಂದಿನ ದಿನಗಳಲ್ಲಿ ಖಾಸಗಿ ಕಂಪನಿಗಳ ಆಡಳಿತಕ್ಕೆ ಒಳಪಡಲಿದ್ದು, ಇದು ನಿಜಕ್ಕೂ ದುರಂತ ಎಂದು ಅಭಿಪ್ರಾಯಪಟ್ಟರು.

ಯೂನಿಯನ್‌ನ ಜಂಟಿ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ರಾಜ್ಯಾದ್ಯಂತ ವಿಸ್ತರಿಸುತ್ತಿರುವ ನೂರಾರು ಸೋಲಾರ್-ವಿಂಡ್ ಮಿಲ್‌ಗಳಲ್ಲಿನ ನೌಕರರು ಅಸಂಘಟಿತರಾಗಿದ್ದು, ಅವರನ್ನು ಸಂಘಟಿಸುವ ಮತ್ತು ಹಕ್ಕಿಗಾಗಿ ಹೋರಾಡುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ ಎಂದರು.

ನೌಕರರ ಸೇವಾ ಭದ್ರತೆ, ನೇಮಕಾತಿ ಪತ್ರ, ಗುರುತು, ವೇತನ ಚೀಟಿ, ಇಎಸ್‌ಐ-ಪಿಎಫ್, ಬೋನಸ್, ಶೂ-ಸಮವಸ್ತ್ರ ಇನ್ನಿತರೆ ಬೇಡಿಕೆಗಳಿಗೆ ಧ್ವನಿ ಎತ್ತಲು ಈ ಸಮಾವೇಶ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದರು.

ಆಲ್ ಇಂಡಿಯಾ ಪವರ್‌ಮೆನ್ಸ್ ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಕೆ.ಸೋಮಶೇಖರ್, ರಾಜ್ಯಾಧ್ಯಕ್ಷ ಎನ್.ಎಸ್.ವೀರೇಶ್, ಕಾರ್ಯದರ್ಶಿ ಗಂಗಾಧರ ಬಡಿಗೇರ್, ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೈದಾಳ್, ಉಪಾಧ್ಯಕ್ಷ ರಂಗನಾಥ್ ಹಂಪನೂರು, ಜಂಟಿ ಕಾರ್ಯದರ್ಶಿ ಲೋಕೇಶ್ ನೀರ್ತಡಿ ಇತರರಿದ್ದರು.