ಚಾಮರಾಜನಗರ: ರಾಜ್ಯ ಸರ್ಕಾರ ನಡೆಸಲಿರುವ ಮುಂದಿನ ಸಚಿವ ಸಂಪುಟ ಸಭೆಯನ್ನು ಆಕ್ಸಿಜನ್ ದುರಂತದ ಸಂತ್ರಸ್ತರು ಎದುರು ನೋಡುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ ಮೃತಪಟ್ಟ 24ಕ್ಕೂ ಹೆಚ್ಚು ಜನರ ಕುಟುಂಬಸ್ಥರ ಕಾಯುವಿಕೆ ಮುಂದುವರೆಯುತ್ತಲೇ ಇದೆ.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೊದಲು ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ್ದರು. ಈ ವೇಳೆ ಆಕ್ಸಿಜನ್ ದುರಂತದ ಸಂತ್ರಸ್ತರನ್ನು ಕರೆಸಿ ಸಂವಾದ ನಡೆಸಿ ನಾವು ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗ, ಸೂಕ್ತ ಪರಿಹಾರ, ನ್ಯಾಯ ಒದಗಿಸಿಕೊಡುವ ಭರವಸೆ ನೀಡಿತ್ತು. ಅಂದಿನಿಂದ ಈವರೆಗೂ ಕಾಂಗ್ರೆಸ್ ಕೊಟ್ಟ ಆಶ್ವಾಸನೆ ಈಡೇರಬಹುದೆಂದು ಸಂತ್ರಸ್ತರು ಅಲೆಯುವುದು ಹಾಗೂ ಕಾಯುವುದನ್ನೇ ಬದುಕಾಗಿಸಿಕೊಂಡಿದ್ದಾರೆ. ಇದೀಗ ಮುಂದಿನ ಕ್ಯಾಬಿನೆಟ್ ಮೀಟಿಂಗ್‌ನತ್ತ ಆಶಾಭಾವದ ಚಿತ್ತ ನೆಟ್ಟಿದ್ದಾರೆ.
ಮತ್ತೆ ಸಿಕ್ಕಿರುವ ಭರವಸೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಏ.24ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ಈಡೇರಲಿಲ್ಲ. ಸ್ವಂತ ಜಿಲ್ಲೆಯಲ್ಲಿ ನಡೆದ ಕ್ಯಾಬಿನೆಟ್‌ನಲ್ಲೇ ನ್ಯಾಯ ಸಿಗದೆ ಹೋದಾಗ ಸಂತ್ರಸ್ತರಿಗೆ ಬೇಸರ ಉಂಟಾಯಿತು. ಸಚಿವ ಸಂಪುಟ ಸಭೆ ನಡೆದ ಮರು ದಿನ ಚಾಮರಾಜನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲು ಹೋದಾಗ ಕಷ್ಟ ಆಲಿಸಲಿಲ್ಲ. ಹೀಗಾಗಿ ಆಕ್ರೋಶಗೊಂಡ ಸಂತ್ರಸ್ತರು ಕಾಂಗ್ರೆಸ್ ಕೊಟ್ಟಿದ್ದ 1 ಲಕ್ಷ ರೂ. ಪರಿಹಾರ ಹಣವನ್ನು ವಾಪಸ್ ಕೊಡುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಮತ್ತು ಸಂಸದ ಸುನೀಲ್‌ಬೋಸ್ ಅಧ್ಯಕ್ಷತೆಯಲ್ಲಿ ಸಂತ್ರಸ್ತರೊಂದಿಗೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮುಂದಿನ ಅಥವಾ ಇದರ ನಂತರ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿ.ಪುಟ್ಟರಂಗಶೆಟ್ಟಿ ಮತ್ತು ಸುನೀಲ್‌ಬೋಸ್ ಸಂತ್ರಸ್ತರಿಗೆ ತಿಳಿಸಿದರು. ಇದಕ್ಕೆ ಒಪ್ಪಿದ ಸಂತ್ರಸ್ತರು ಮುಂದೆ ನಡೆಯಲಿರುವ ಸಚಿವ ಸಂಪುಟ ಸಭೆಯನ್ನೇ ಎದುರು ನೋಡುತ್ತಿದ್ದಾರೆ.
ತನಿಖೆಗಾಗಿ ಅಫಿಡವಿಟ್ ಸಲ್ಲಿಕೆ:
ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರ ತನಿಖೆಗಾಗಿ ಅಫಿಡವಿಟ್ ಸಲ್ಲಿಕೆ ಮಾಡಲು ಆಕ್ಸಿಜನ್ ದುರಂತದ ಸಂತ್ರಸ್ತರು ಮುಂದಾಗಿದ್ದಾರೆ. ಮುಂದಿನ ವಾರ ಬೆಂಗಳೂರಿಗೆ ತೆರಳಿ ಅಫಿಡವಿಟ್ ಸಲ್ಲಿಕೆ ಮಾಡಲಿದ್ದಾರೆ. ನ್ಯಾಯದ ನಿರೀಕ್ಷೆಯಲ್ಲಿರುವ ಸಂತ್ರಸ್ತರಿಗೆ ಈ ತನಿಖೆಯ ಮೇಲೆ ಭರವಸೆ ಇದೆ. ಸರ್ಕಾರಿ ಉದ್ಯೋಗ ದೊರೆಯಬೇಕೆಂಬುದು ಮಾತ್ರ ಇವರ ಬೇಡಿಕೆಯಲ್ಲ. ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಆಮ್ಲಜನಕ ನೀಡದೆ ಉಸಿರಾಟ ಸಮಸ್ಯೆಯಿಂದ ಸೋಂಕಿತರ ಮಾರಣಹೋಮ ನಡೆಯಲು ಕಾರಣರಾಗಿರುವವರ ವಿರುದ್ಧವೂ ಕ್ರಮವಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬ ಒತ್ತಾಯವಿದೆ.
ಸಿಕ್ಕ ಕೊಡುಗೆಯ ಲೆಕ್ಕ: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ ಸಿಕ್ಕ ಕೊಡುಗೆಗಳ ಲೆಕ್ಕಾಚಾರ ಇನ್ನೂ ನಡೆಯುತ್ತಲೇ ಇದೆ. ಚಾಮರಾಜನಗರ, ಕೊಳ್ಳೇಗಾಲ, ಹನೂರು, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳ ಅಭಿವೃದ್ಧಿಗೆ ಸಿಕ್ಕಿರುವ ಅನುದಾನ ಮತ್ತು ಸೌಲಭ್ಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ನಿರೀಕ್ಷೆ ಹುಸಿಯಾಗಿ ನಿರಾಸೆ ಕಾಡುತ್ತಿರುವ ಆಕ್ಸಿಜನ್ ದುರಂತದ ಸಂತ್ರಸ್ತರೂ ಇದ್ದಾರೆ.
ಮುಂದಿನ ಸಚಿವ ಸಂಪುಟ ಸಭೆಗಳಲ್ಲಿ ನಮಗೆ ಸರ್ಕಾರಿ ಉದ್ಯೋಗ ಕೊಡುವ ವಿಚಾರದ ಚರ್ಚೆ ನಡೆಯಲಿದೆ ಎಂದು ಕಾಯುತ್ತಿದ್ದೇವೆ. ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಕುನ್ಹಾ ಅವರಿಗೆ ಅಫಿಡವಿಟ್ ಸಲ್ಲಿಕೆ ಮಾಡಲಿದ್ದೇವೆ. ನಲ್ಲೂರು ಮಂಜುನಾಥ್, ಆಕ್ಸಿಜನ್ ದುರಂತದ ಸಂತ್ರಸ್ತ, ಚಾಮರಾಜನಗರ ಆಕ್ಸಿಜನ್ ಸಂತ್ರಸ್ತರಿಗೆ ಉದ್ಯೋಗ ನೀಡುವ ವಿಚಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿದೆ. ಅಲ್ಲದೇ, ಮೇ 28ರಂದು ಚಾಮರಾಜನಗರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ಆಗ ಅವರೊಂದಿಗೆ ಸಂತ್ರಸ್ತರ ಕುರಿತು ಮಾತನಾಡುತ್ತೇನೆ. ಮಾನವೀಯತೆ ದೃಷ್ಟಿಯಿಂದ ಸಂತ್ರಸ್ತರ ಪರವಾಗಿ ಕೆಲಸ ಮಾಡಿಕೊಡಬೇಕಿದೆ. ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ