ದಾವಣಗೆರೆ: ನೇರ ಪಾವತಿ ವ್ಯಾಪ್ತಿಗೆ ಒಳಪಡಿಸಬೇಕು. ಇಲ್ಲವೇ ಕಾಯಂಗೊಳಿಸಬೇಕೆಂದು ಆಗ್ರಹಿಸಿ ಚಿಗಟೇರಿ ಜಿಲ್ಲಾಸ್ಪತ್ರೆಯ ನಾನ್ ಕ್ಲಿನಿಕಲ್ ಮತ್ತು ಡಿ ದರ್ಜೆ ನೌಕರರು ಮಂಗಳವಾರ ಕೆಲಸ ಸ್ಥಗಿತಗೊಳಿಸಿ ಆಸ್ಪತ್ರೆ ಎದುರು ಧರಣಿ ಆರಂಭಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರು ಹಾಗೂ ಇತರೆ ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಡಿ ಆಸ್ಪತ್ರೆಯಲ್ಲಿನ 195 ಕಾರ್ಮಿಕರು ಧರಣಿ ಕೂತಿದ್ದಾರೆ.
ಕಳೆದ 20 ವರ್ಷದಿಂದ ಹೊರಗುತ್ತಿಗೆಯಡಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಪೌರಕಾರ್ಮಿಕರ ಮಾದರಿಯಲ್ಲೇ ನಮ್ಮನ್ನೂ ನೇರ ಪಾವತಿಗೆ ಒಳಪಡಿಸಬೇಕು. ಇಲ್ಲವೇ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಕೋವಿಡ್ ಸಂದರ್ಭದಲ್ಲಿ ನಾವೂ ಮನೆಗೆ ತೆರಳದೆ ಹಾಸ್ಟೆಲ್ ಇತರೆಡೆ ತಂಗಿದ್ದು ಜೀವದ ಹಂಗು ತೊರೆದು ಕೆಲಸ ನಿರ್ವಹಿಸಿದ್ದೇವೆ. ಆದರೆ ಶಾಶ್ವತ ಸಿಬ್ಬಂದಿಗೆ ಮಾತ್ರವೇ ಸರ್ಕಾರ ರಿಸ್ಕ್ ಅಲೋವೆನ್ಸ್ ಮಂಜೂರು ಮಾಡಿದೆ.
ಸಿಎಂ ಹಾಗೂ ಸಚಿವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ನಮ್ಮನ್ನು ಕಡೆಗಣಿಸಲಾಗಿದೆ. ಆರೋಗ್ಯ ಸಚಿವ ಸುಧಾಕರ್ ನೀಡಿದ ಭರವಸೆಯಂತೆ ನಮಗೂ ತಿಂಗಳಿಗೆ 10 ಸಾವಿರ ರೂ.ಗಳ ರಿಸ್ಕ್ ಅಲೋವೆನ್ಸ್ ನೀಡಬೇಕು. ಈ ಬಗ್ಗೆ ಪ್ರಕಟಣೆ ಹೊರಡಿಸುವವರೆಗೆ ಧರಣಿ ಮುಂದುವರಿಯಲಿದೆ ಎಂದು ಸಂಘದ ಅದ್ಯಕ್ಷ ಡಿ.ಹನುಮಂತಪ್ಪ ಹೇಳಿದರು.
ಪ್ರತಿಭಟನೆಯಲ್ಲಿ ಗುತ್ತಿಗೆ ನೌಕರರಾದ ಕೆ.ಬಸವರಾಜ್, ಎಚ್. ತಿಪ್ಪೇಸ್ವಾಮಿ, ಎಚ್.ಎಚ್.ಕರಿಬಸಪ್ಪ, ಎಚ್.ಡಿ. ಸುರೇಂದ್ರ, ಜಿ.ಬಸವರಾಜ, ಎಸ್. ಗುರುಮೂರ್ತಿ, ಮಹಾಂತೇಶ್, ಹೂವಮ್ಮ, ವಿನೋದಾಬಾಯಿ, ಆಲೂರು ಹನುಮಕ್ಕ, ಅನಿತಾ ಲಕ್ಷ್ಮಿ, ಶಾಯಿನಾ, ಕೆ.ಎಂ.ಸರೋಜಮ್ಮ ಇತರರಿದ್ದರು.
--
* ಗುತ್ತಿಗೆದಾರರೇ ಹೊಣೆ
ಗುತ್ತಿಗೆದಾರರು ಒದಗಿಸುವ ಹೊರಗುತ್ತಿಗೆ ಸಿಬ್ಬಂದಿ ಕಾಯಮಾತಿಗೆ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಲು ಕಾನೂನಿನಡಿ ಅವಕಾಶವಿಲ್ಲ. ಈ ಸಿಬ್ಬಂದಿಯ ವಿವಾದಗಳಿಗೆ ಆಸ್ಪತ್ರೆಯಾಗಲೀ ಸಂಗ್ರಹ ಸಂಸ್ಥೆಯ ಅಧಿಕಾರಿಯಾಗಲೀ ಸಂಬಂಧಪಡುವುದಿಲ್ಲ. ನಮ್ಮ ಸಂಸ್ಥೆಯು ಸಿಬ್ಬಂದಿಯಿಂದ ವೈಯಕ್ತಿಕ ಅಥವಾ ಸಾಮೂಹಿಕವಾಗಿ ಯಾವುದೇ ಅರ್ಜಿ, ದೂರು ಸಲ್ಲಿಸುವುದಿಲ್ಲ. ಮತ್ತು ಇಂತಹ ಅರ್ಜಿಗಳನ್ನು ಸ್ವಯಂ ತಿರಸ್ಕೃತ ಎಂದು ಪರಿಗಣಿಸಲು ಒಪ್ಪಿಕೊಳ್ಳಲಾಗಿದೆ ಎಂದು ಷರತ್ತು ವಿಧಿಸಲಾಗಿದೆ. ಹೀಗಾಗಿ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆದಾರರೇ ಹೊಣೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
--