ಬಾಗೇಪಲ್ಲಿ : ಸೊಸೈಟಿಗಳಿಗೆ ಹೊಸ ಕಾಯಕಲ್ಪ ನೀಡುವ ಹೊಣೆಗಾರಿಕೆ ಹೊತ್ತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಇಲ್ಲವಾದಲ್ಲಿ ಮುಲಾಜಿಲ್ಲದೆ ಕೆಲಸದಿಂದ ವಜಾ ಮಾಡುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕಾರ್ಯದರ್ಶಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಮಂಗಳವಾರ ವಿಎಸ್‌ಎಸ್‌ಎನ್ ಕಾರ್ಯದರ್ಶಿಗಳಿಗೆ ತರಬೇತಿ ಹಾಗೂ ವಿಶೇಷ ಸಭೆಯಲ್ಲಿ ಮಾತನಾಡಿ, ಸೊಸೈಟಿ ಕಾರ್ಯದರ್ಶಿಗಳು ಹಳ್ಳಿಗಳಲ್ಲಿ ರಾಜಕೀಯ ಮಾಡೋದು ಬಿಟ್ಟು ರೈತರ ಮತ್ತು ಮಹಿಳೆಯರಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಕಲ್ಪಿಸುವ ಕೆಲಸ ಮಾಡಬೇಕು. ದುಡಿಯುವ ಕೈಗಳಿಗೆ ಸಾಲ ನೀಡಿದರೆ ಹೈನುಗಾರಿಕೆ, ಕೃಷಿ ಹಾಗೂ ಸಣ್ಣ ಕೈಗಾರಿಕೆ ಕ್ಷೇತ್ರಗಳು ಅಭಿವೃದ್ಧಿ ಆಗುತ್ತವೆ ಎಂದರು.
ಗುರಿ ಸಾಧನೆ ಕಡ್ಡಾಯ: ಕಾಯಕ ಯೋಜನೆಯಡಿಯಲ್ಲಿ ಪ್ರತಿ ಹೆಣ್ಣುಮಗುವಿಗೂ 1 ಲಕ್ಷ ರೂ ಸಾಲ ನೀಡಬೇಕು. ಗುರಿ ಸಾಧನೆಯಲ್ಲಿ ಯಾವುದೇ ಕಾರಣಕ್ಕೂ ವಿಫಲರಾಗಬಾರದು. ಏಪ್ರಿಲ್‌ನಿಂದ ಕಾರ್ಯದರ್ಶಿಗಳಿಗೆ ಹೊಸ ನೀತಿ ಜಾರಿ ಆಗಲಿದ್ದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಹೊಸ ಅವತಾರ ತಾಳಲಿದೆ. ಹೊಸ ಸಂಬಳದ ನೀತಿ ಜಾರಿಗೆ ತಂದು ಅಪ್ರಾಮಾಣಿಕರನ್ನು ಕೆಲಸದಿಂದ ವಜಾಗೊಳಿಸಿ ಹೊಸಬರನ್ನು ಅಯ್ಕೆ ಮಾಡುತ್ತೇವೆ, ಅದ್ದರಿಂದ ಕಾರ್ಯದರ್ಶಿಗಳು ಗುರಿ ಸಾಧನೆ ಕಡ್ಡಾಯವೆಂದು ತಾಕೀತು ಮಾಡಿದರು.
ತಾಲೂಕು ವ್ಯಾಪ್ತಿಯ ವಿವಿಧ ಸೊಸೈಟಿಗಳಿಂದ ಸಂಗ್ರಹಿಸಲಾಗಿದ್ದ 11 ಕೋಟಿ ರೂ. ಠೇವಣಿ ಮೊತ್ತವನ್ನು ಬಾಗೇಪಲ್ಲಿ ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಕೇಂದ್ರ ಕಚೇರಿ ಎಜಿಎಂಗೆ ಹಸ್ತಾಂತರಿಸಿದರು. ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜು, ಕೇಂದ್ರ ಕಚೇರಿ ಎಜಿಎಂ ಕಲೀಂವುಲ್ಲಾ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸಿ.ಎನ್.ಚೇತನ್, ಮೇಲ್ವಿಚಾರಕ ಎನ್.ಅಜೇಯ್, ಎನ್.ಗೋಪಾಲ, ಸೊಸೈಟಿ ಅಧ್ಯಕ್ಷರಾದ ಕಾಮರೆಡ್ಡಿ, ಸಿ.ಎನ್.ಬಾಬುರೆಡ್ಡಿ, ನಂಜುಂಡಪ್ಪ, ಬೈಯಪ್ಪರೆಡ್ಡಿ, ಮಂಜುನಾಥರೆಡ್ಡಿ, ಮಾಜಿ ಅಧ್ಯಕ್ಷ ಚಂದ್ರಶೇಖರರೆಡ್ಡಿ ಹಾಗೂ ಕಾರ್ಯದರ್ಶಿಗಳು ಇದ್ದರು.