ಹಾಸನ: ಗುರು ಎಂತಹದ್ದೇ ಸಂದರ್ಭದಲ್ಲಿ ಶಿಷ್ಯನ ಪರವಾಗಿ ನಿಂತು ಬೆಂಬಲಿಸುತ್ತಾರೆ. ಸಮುದ್ರಯಾನದಲ್ಲಿ ಸಿಲುಕಿದವರಿಗೆ ಧ್ರುವತಾರೆ ನಕ್ಷತ್ರಗಳು ಹೇಗೆ ಮಾರ್ಗದರ್ಶಕವಾಗಿ ಕೆಲಸ ಮಾಡುತ್ತವೆಯೋ ಅದೇ ಒಬ್ಬ ಗುರು ಶಿಷ್ಯರಿಗೆ, ಸಮಾಜಕ್ಕೆ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕ ಸುವರ್ಣ ಸಂಪೂರ್ತಿ ಮಹೋತ್ಸವದ ಸವಿನೆನಪಿಗಾಗಿ ಸೆ.26ರಿಂದ 28ರವರೆಗೆ ಮೂರು ದಿನಗಳ ಕಾಲ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದಲ್ಲಿ ಹಮ್ಮಿಕೊಂಡಿರುವ ಸುವರ್ಣ ಸಂಪೂರ್ತಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳು ಸಹ ಅದೇ ರೀತಿ ಸಮಾಜದ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಿದವರು ಎಂದು ಹೇಳಿದರು.
ಬಾಲಗಂಗಾಧರ ನಾಥ ಸ್ವಾಮೀಜಿಗಳು ಯಾವಾಗಲು ಕರ್ಮದಲ್ಲಿಯೇ ಇರುತ್ತಾರೆಯೇ ಅವರು ಜ್ಞಾನದ ತುತ್ತತುದಿ ತಲುಪುವುದು ಯಾವಾಗ ಎಂದು ಹಲವರು ಕೇಳುತ್ತಿರುತ್ತಾರೆ. ಆದರೆ, ಅವರು ಜ್ಞಾನವೆಂಬ ಬೆಟ್ಟದ ತುತ್ತತುದಿಯಲ್ಲಿ ನಿಂತು ಕಣಿವೆ ಕೆಳಗೆ ಇರುವ ಜನರಿಗೆ ಮಾರ್ಗದರ್ಶನ ನೀಡುವುದಾದರೂ ಹೇಗೆ? ಅದಕ್ಕಾಗಿಯೇ ಅವರು ಹಿಮಾಲಯದ ಸದೃಶ್ಯ ಸ್ವಾಮಿಗಳಾದರೂ ಕಣಿವೆ ಕೆಳಗಿನಿಂದಲೇ ಜನರನ್ನು ಮೇಲೆತ್ತುವ ಕೆಲಸ ಮಾಡಿದರು. ಹಾಗಾಗಿ ಅವರು ಕೊನೆವರೆಗೂ ಕರ್ಮದಲ್ಲಿ ತೊಡಗಿಸಿಕೊಂಡರು ಎಂದು ಬಣ್ಣಿಸಿದರು.
ಒಮ್ಮೆ ಕೆಂಗಲ್ ಹನುಮಂತಯ್ಯ ಅವರು ಬಾಲಗಂಗಾಧರ ನಾಥ ಶ್ರೀಗಳ ಸಾನಿಧ್ಯದ ಕಾರ್ಯಕ್ರಮದ ಭಾಷಣದಲ್ಲಿ ನಾನು ಯಾವುದೇ ಮಠಕ್ಕೆ ಕರೆ ಮಾಡಿ ಶ್ರೀಗಳು ಎಲ್ಲಿ ಎಂದು ಕೇಳಿದರೆ ಶ್ರೀಗಳು ಧ್ಯಾನದಲ್ಲಿದ್ದಾರೆ, ಮಂತ್ರೋಪಚಾರದಲ್ಲಿ ಇದ್ದಾರೆ, ಪೂಜೆಯಲ್ಲಿ ತಲ್ಲೀನರಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ ನಮ್ಮ ಮಠಕ್ಕೆ ಕರೆ ಮಾಡಿ ಸ್ವಾಮೀಜಿ ಎಲ್ಲಿ ಎಂದು ಕೇಳಿದರೆ ತೋಟದಲ್ಲಿದ್ದಾರೆ, ಕೆರೆಯ ಬಳಿ ಇದ್ದಾರೆ, ಗೋ ಶಾಲೆಯಲ್ಲಿದ್ದಾರೆ ಎಂದು ಸ್ವಾಮೀಜಿಗಳ ಎದುರೇ ಮಾರ್ಮಿಕವಾಗಿ ಹೇಳಿದರು. ಇದಕ್ಕೆ ಪ್ರತಿಯಾಗಿ ಬಾಲಗಂಗಾಧರನಾಥ ಸ್ವಾಮೀಜಿ ಅವರು ಏಕೆಂದರೆ ನಾನು ರೈತರ ಸ್ವಾಮೀಜಿ, ಹೀಗಾಗಿ ನಾನು ರೈತರ ಬಳಿಯೇ ಇರಬೇಕು ಎಂದು ಪ್ರತ್ಯುತ್ತರ ನೀಡಿದ್ದಾಗಿ ತಿಳಿಸಿದರು.
ಎಷ್ಟೋ ಬಾರಿ ನಾವೇ ನಮ್ಮ ಗುರುಗಳ ಬಗ್ಗೆ ಮಾತನಾಡಿದಷ್ಟು ಅವರು ಹೊಸದಾಗಿ ತೆರೆದುಕೊಳ್ಳುತ್ತಾ ಹೋಗುತ್ತಾರೆ. ಅಂತರಂಗದ ಕಣ್ಣು ಶುದ್ಧಿಯಾಗದಿದ್ದರೆ ಸಾಮಾನ್ಯ ರೂಪದಲ್ಲಿ ನಮ್ಮೆಡೆಗೆ ಬರುವ ದೇವರನ್ನು ನಾವು ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಅಂದಕಾರ ಇದ್ದರೆ ದೇವರು ಎದುರಿಗೆ ಬಂದಾಗಲೂ ಕಾಣಲಾಗುವುದಿಲ್ಲ. ಅದಕ್ಕಾಗಿ ನಾವು ಪ್ರತಿದಿನ ನಮ್ಮ ಮನಸ್ಸನ್ನು ಶುದ್ದೀಕರಿಸಿಕೊಳ್ಳಬೇಕು. ಈ ಪ್ರಕ್ರಿಯೆಗೆ ಗುರುಗಳ ಮಾರ್ಗದರ್ಶನ ಅತ್ಯವಶ್ಯಕ. ನಮ್ಮ ಗುರುಗಳು ಚಿಕ್ಕ ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದವರು. ಅವರು ಬೆಳೆದ ರೀತಿ ಮಾದರಿ, ಮಾದರಿಯುತ ಕೆಲಸಗಳು ಎಂತಹವರನ್ನು ಚಕಿತರನ್ನಾಗಿ ಮಾಡಿಬಿಡುತ್ತವೆ ಎಂದರು.
ಬೆಂಗಳೂರಿನ ಬೇಲಿ ಮಠದ ಶಿವರುದ್ರ ಮಹಾಸ್ವಾಮೀಜಿ ಮಾತನಾಡಿ, ಬಾಲಗಂಗಾಧರನಾಥ ಶ್ರೀಗಳು ನಾನು ಒಂದೇ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಯನ ಮಾಡುತ್ತಿದ್ದೆವು. ನಮಗೆ ಅವರು ಹಿರಿಯಣ್ಣನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡಿದರು. ಬಾಲಗಂಗಾಧರ ಸ್ವಾಮೀಜಿ 1974ರಲ್ಲಿ ಆದಿಚುಂಚನಗಿರಿ ಮಠಕ್ಕೆ 73ನೇ ಪೀಠಾಧ್ಯಕ್ಷರಾದರು. ಆ ಸಮಯದಲ್ಲಿ ನಾನು ಒಮ್ಮೆ ಹೋದಾಗ ಕಡಿದಾದ ಬೆಟ್ಟದ ಮೇಲಿನ ಆದಿಚುಂಚನಗಿರಿ ಮಠದಲ್ಲಿ ಚಿಕ್ಕದಾದ ದೇವಾಲಯ, ಅದರ ಪಕ್ಕದಲ್ಲಿಯೇ ಇದ್ದ ಸಣ್ಣ-ಸಣ್ಣ ಕೊಠಡಿ ಬಿಟ್ಟು ಬೇರೆನೂ ಇರಲ್ಲಿ. ಈ ಕೊಠಡಿಯೊಂದರಲ್ಲಿ ಶ್ರೀಗಳು ವಾಸವಾಗಿದ್ದರು. ಬಳಿಕ ಶ್ರೀಗಳು ಜನರೊಂದಿಗೆ ಇದ್ದುಕೊಂಡು ಮಠವನ್ನು ಬೆಳೆಸಿದ ರೀತಿ ಸೋಜಿಗವೇ ಸರಿ ಎಂದು ಹೇಳಿದರು.
ಉಡುಪಿ ಸಮಾವೇಶದಲ್ಲಿ ಸಾತ್ವಿಕರಾದ ರುದ್ರಾಕ್ಷಿಮುನಿ ಸ್ವಾಮೀಜಿ ಬಂದಿದ್ದರು. ಆ ಸಮಯದಲ್ಲಿ ಆ ಮಠ ಸಾಕಷ್ಟು ಸಮಸ್ಯೆಯಲ್ಲಿತ್ತು. ಅವರು ನನ್ನ ಬಳಿ ಬಂದು ನಮ್ಮ ಮಠಕ್ಕೆ ಏನಾದರೂ ಸಹಾಯ ಸಿಗಬಹುದು ಎಂದು ಕೇಳಿದರು. ಅದಕ್ಕೆ ನಾನು ಇಲ್ಲಿ ಇರುವವರಿಂದ ಏನನ್ನೂ ನಿರೀಕ್ಷಿಸಬೇಡಿ ಎನ್ನುವಾಗಲೇ ಬಾಲಗಂಗಾಧರ ನಾಥ ಸ್ವಾಮೀಜಿಗಳು ಬಂದರು. ಅವರನ್ನು ರುದ್ರಾಕ್ಷಿಸ್ವಾಮಿಗೆ ತೋರಿಸಿ. ಇವರನ್ನು ಭೇಟಿಯಾಗಿ ಎಂದು ತಿಳಿಸಿದೆ. ಅದರಂತೆ ಬಾಲಗಂಗಾಧರ ನಾಥ ಶ್ರೀಗಳ ಬಳಿ ರುದ್ರಾಕ್ಷಿ ಮುನಿ ಸ್ವಾಮಿ ತಮ್ಮ ಸಮಸ್ಯೆ ಹೇಳಿಕೊಂಡರು. ಈ ಸಮಸ್ಯೆಗಳ ವಾಸ್ತವವನ್ನು ಅರಿತ ಮೇಲೆ ಬಾಲಗಂಗಾಧರ ನಾಥ ಶ್ರೀಗಳು ತಾವೇ ಖುದ್ದಾಗಿ ರುದ್ರಾಕ್ಷಿ ಮಠಕ್ಕೆ ತೆರಳಿ ಪ್ರವಾಹದಿಂದ ಸಂಪೂರ್ಣ ನಾಶವಾಗಿದ್ದ 10 ಎಕರೆ ಭೂಮಿಯನ್ನು ಶಿಷ್ಯರೊಂದಿಗೆ ಸೇರಿ ಹದಗೊಳಿಸಿದರು. ಅಷ್ಟು ಭೂಮಿಗೆ ತೆಂಗಿನ ಗಿಡಗಳನ್ನು ನೆಡಿಸಿದರು. ಇಂದು ಆ ಮಠ ಸುಬೀಕ್ಷವಾಗಿದೆ ಎಂದು ತಿಳಿಸಿದರು.
ಎಲ್ಲ ನಾಥ ಪಂಥದ ಪ್ರಮುಖ ತಾಣವಾದ ಉಜೈನಿಯಲ್ಲಿ ಕಾಲಭೈರವೇಶ್ವರ ದೇಗುಲ ಶಿಥಿಲಗೊಂಡಿತು. ಇದನ್ನು ನೋಡಿದ ಶ್ರೀಗಳು ಭೈರವೇಶ್ವರ ದೇಗುಲವನ್ನು ಪುನರುಜ್ಜೀವನಗೊಳಿಸಿದರು. ಇಂದು ಇದು ದೇಶದ ಪ್ರಮುಖ ದೇವಾಲಯವಾಗಿದೆ. ಕಾಶಿಯಲ್ಲಿ ಭೈರವ ಜಾಗೃತಗೊಳಿಸಬೇಕು ಎಂದು ಹೇಳಿದ್ದ ಅವರು ಅಲ್ಲಿ ಮಠ ನಿರ್ಮಾಣಕ್ಕೆ ಜಾಗವೊಂದನ್ನು ಖರೀದಿಸಿ, ಮಠ ಕಟ್ಟಿಸಿದರು. ಇಂದು ಕಾಶಿಯಲ್ಲಿ ಭೈರವ ಮಠ ಕಾಶಿ ಕಾರಿಡಾರ್ ಎನ್ನುವಂತಾಗಿದೆ ಎಂದು ಹೇಳಿದರು.
ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ಶ್ರೀಗಳು ಆಂನತರ ವಾರಪೂರ್ತಿ ದಣಿವರಿಯದೆ ದುಡಿಯುತ್ತಿದ್ದರು. ಯಾಕಿಷ್ಟು ಶ್ರಮ ಎಂದು ನಾನು ಕೇಳಿದಾಗ ಯಾವುದೇ ಸಂಕಲ್ಪ ಮಾಡಿದರೂ ಅದನ್ನು ಪೂರ್ಣಗೊಳಿಸುವುದು ನಮ್ಮ ಕರ್ತವ್ಯ. ಶಾರೀರಿಕ ಸಮಸ್ಯೆ ನೆಪವೊಡ್ಡಿ ನಮ್ಮ ಸಂಕಲ್ಪ ನಿರ್ಲಕ್ಷಿಸುವುದು ಸರಿಯಲ್ಲ ಎಂದು ಹೇಳಿದ್ದರು. ಅವರೊಬ್ಬರು ಅತ್ಯುತ್ತಮ ಇಂಜಿನಿಯರ್ ಕೂಡ ಹೌದು. ಕಡಿದಾದ ಜಾಗದಲ್ಲಿ ಮಠದ ಅಭಿವೃದ್ಧಿಗೊಳಿಸಿದ ಕೆಲಸ ಎಲ್ಲರಿಗೂ ಆಶ್ಚರ್ಯ ಮೂಡಿಸಿತು. ಇಡೀ ದೇಶದ ಗಣ್ಯರ ಗಮನ ಸ್ವಾಮೀಜಿ ಮೇಲಿದ್ದರೆ ಇವರ ಗಮನ ದಟ್ಟ ದಾರಿದ್ರೃರ, ದೀನರ, ಗುಡಿಸಲು ಮನೆಯಲ್ಲಿ ವಾಸಿಸುವರ ಮೇಲಿತ್ತು. ಹೀಗಾಗಿ ಅವರು ಇಂದಿಗೂ ನಮ್ಮ ಹೃದಯಪೀಠದಲ್ಲಿ ಆಸೀನರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಶಂಭುನಾಥ ಸ್ವಾಮೀಜಿ, ಕಾಗೆನೆಲೆ ಪೀಠದ ಶಿವಾನಂದ ಪುರಿ ಸ್ವಾಮೀಜಿ, ಪುರುಷೋತ್ತಮಾನಂದ ಸ್ವಾಮಿಜಿ, ಮೈಸೂರಿನ ಸೋಮೇಶ್ವರನಾಥ ಸ್ವಾಮೀಜಿ, ಡಾ.ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿ ಅನ್ನದಾನೇಶ್ವರ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಕೈಲಾಸನಾಥ ಸ್ವಾಮೀಜಿ, ರಮಾನಂದನಾಥ ಸ್ವಾಮೀಜಿ, ತಮಿಳುನಾಡಿನ ಕುಂಭಂ ಶಾಸಕ ರಾಮಕೃಷ್ಣಂ, ಶಾಸಕ ಸ್ವರೂಪ್ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್, ಮಠದ ಟ್ರಸ್ಟಿ ದೇವರಾಜ್, ಮಾಜಿ ಶಾಸಕ ಎಟಿ ರಾಮಸ್ವಾಮಿ, ಶಂಕರೇಗೌಡ, ಎಂ. ಚಂದ್ರೇಗೌಡ, ಸುಮುಖ ರಘು, ಹೆಮ್ಮಿಗೆ ಮೋಹನ್, , ಜಿ.ಎಲ್. ಮುದ್ದೇಗೌಡ, ಬಿ.ಪಿ.ಚಂದ್ರೇಗೌಡ ಇತರರಿದ್ದರು.
ಬೆಳ್ಳಿ ತುಲಾಭಾರ
ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕ ಸುವರ್ಣ ಸಂಪೂರ್ತಿ ಮಹೋತ್ಸವದಲ್ಲಿ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಬೆಳ್ಳಿ ವಿಗ್ರಹಕ್ಕೆ ಬೆಳ್ಳಿ ನಾಣ್ಯಗಳಿಂದ ತುಲಾಭಾರ ನಡೆಸಲಾಯಿತು.