ಜಿಲ್ಲೆ

ಕಾಯಕದಲ್ಲೇ ಕೈಲಾಸ ಕಾಣ್ಬೇಕು

ಕಲಬುರಗಿ: ಕೈಲಾಸ ಎಂಬುದು ಸತ್ತ ಮೇಲೆ ಅನುಭವಿಸುವುದಲ್ಲ, ಒಳ್ಳೆಯ ಕಾಯಕ ಮಾಡಿ ಇರುವಾಗಲೇ ಕೈಲಾಸದ ಅನುಭವ ಕಾಣುವತ್ತ ಚಿತ್ತ ಹರಿಸಬೇಕು ಎಂದು ಹಿರಿಯ ಸಮಾಜ ಸೇವಕಿ ಚನ್ನಮ್ಮ ಹಳ್ಳಿಕೇರಿ ಯುವಕರು, ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗೋದುತಾಯಿ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾತೋಶ್ರೀ ಗೋದುತಾಯಿ ಸ್ಮರಣೋತ್ಸವದಲ್ಲಿ ಅವ್ವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಜೀವನದಲ್ಲಿ ಸೋಮಾರಿತನ ಪ್ರವೇಶಕ್ಕೆ ಅವಕಾಶ ನೀಡಬಾರದು. ಒಂದ್ಸಲ ಅದು ನಮ್ಮೊಳಗೆ ನುಸುಳಿದರೆ ಜೀವನ ಬರ್ಬಾದ್ ಮಾಡಿಯೇ ಹೊರಗೆ ಹೋಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಸದಾ ಚಟುವಟಿಕೆಯಿಂದ ಇರುವ ಮೂಲಕ ಸೋಮಾರಿತನವನ್ನು ದೂರ ಇಡಬೇಕು ಎಂದು ಸಲಹೆ ನೀಡಿದರು.
ನಾನು ಗಾಂಧಿವಾದಿ. ಅಹಿಂಸೆಯನ್ನು ಪ್ರತಿಪಾದಿಸುತ್ತ ಬಂದಿದ್ದೇನೆ. ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನ ನಿಮಿತ್ತ ದೇಶದ 150 ಕಾಲೇಜುಗಳಲ್ಲಿ ಉಪನ್ಯಾಸ ನೀಡುವ ಮೂಲಕ ಗಾಂಧೀಜಿ ಅವರ ದೇಶಸೇವೆ ಸ್ಮರಿಸುವ ಕೆಲಸ ಮಾಡಿದ್ದೇನೆ ಎಂದರು.
ಇನ್ನೊಬ್ಬರ ಮೇಲೆ ಅವಲಂಬಿಸಿ ಬದುಕದೆ ಸ್ವಾವಲಂಬಿಯಾಗಿರಬೇಕು. ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸಬಹುದು. ಇಂದು ಪರಿಶ್ರಮದಿಂದ ಮಹಿಳೆಯರು ಮಹತ್ತರ ಸಾಧನೆ ಮಾಡುತ್ತಿದ್ದಾರೆ ಎಂದ ಅವರು, ಶರಣಬಸವೇಶ್ವರ ಸಂಸ್ಥಾನ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕೊಂಡಾಡಿದರು.
ಪ್ರಾಚಾರ್ಯ ನೀಲಾಂಬಿಕಾ ಶೇರಿಕಾರ ಪ್ರಾಸ್ತಾವಿಕ ಮಾತನಾಡಿ, ಶರಣಬಸವೇಶ್ವರ ಸಂಸ್ಥಾನ ಹೆಣ್ಮಕ್ಕಳಿಗಾಗಿ ಪ್ರತ್ಯೇಕ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಮೂಲಕ ಸ್ತ್ರೀ ಶಿಕ್ಷಣಕ್ಕೆ ಒತ್ತು ಕೊಟ್ಟಿದೆ. ಗೋದುತಾಯಿ ಅವರ ಜನ್ಮದಿನ ನಿಮಿತ್ತ ಸಮಾಜ ಸೇವಕಿ ಚನ್ನಮ್ಮ ಹಳ್ಳಿಕೇರಿ ಅವರಿಗೆ ಅವ್ವ ಪ್ರಶಸ್ತಿ ನೀಡಿದ್ದು ಶ್ಲಾಘನೀಯ ಎಂದರು.
ಶ್ರೀ ಡಾ.ಶರಣಬಸವಪ್ಪ ಅಪ್ಪ ಸಹೋದರಿಯರಾದ ನೀಲಮ್ಮ ತಾಯಿ, ಪಂಚಮ್ಮ ತಾಯಿ, ಪ್ರಮುಖರಾದ ಡಾ.ವಿಲಾಸವತಿ ಖೂಬಾ, ಅಮರೇಶ್ವರಿ ಚಿಂಚನಸೂರ, ಸಂತೋಷಿ ಪಾಟೀಲ್ ತೆಲ್ಕೂರ, ಜಾನಕಿ ಹೊಸೂರ, ಡಾ.ಇಂದಿರಾ ಶಕ್ತಿ, ಸಿದ್ದಮ್ಮ ಗುಡೇದ, ಡೊಳ್ಳೆಗೌಡರ, ಚವ್ಹಾಣ್, ಕೃಪಾಸಾಗರ ಗೊಬ್ಬೂರ ಇತರರಿದ್ದರು.

ಗ್ರೀನ್ ಸಿಟಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಬಿಸಿಲೂರನ್ನು ಹಸಿರೂರಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಈ ಕಾರ್ಯ ಸೇಡಂದಿಂದಲೇ ಆರಂಭಿಸಲಾಗುವುದು. ಕಲಬುರಗಿ ಎಂದಾಕ್ಷಣ ತುಂಬ ಬಿಸಿಲು ಎಂಬ ಮಾತು ಕೇಳಿಬರುತ್ತದೆ. ಅದನ್ನು ಅಲ್ಲಗಳೆಯುವ ಪ್ರಯತ್ನವನ್ನು ತೆಲ್ಕೂರ ಪ್ರತಿಷ್ಠಾನ ಮಾಡಲಾಗುವುದು. ಇದಕ್ಕೆ ಜನಸಹಕಾರ ಅಗತ್ಯ.
| ಸಂತೋಷಿ ರಾಜಕುಮಾರ ಪಾಟೀಲ್ ತೆಲ್ಕೂರ