ಜಿಲ್ಲೆ

ಕಾಯಕದಲ್ಲಿ ಭವಿಷ್ಯದ ದೃಷ್ಟಿ ಇರಲಿ

ಕಲಬುರಗಿ: ಆಧುನಿಕ ನಾಗರಿಕತೆಯಲ್ಲಿ ವಾಣಿಜ್ಯೋದ್ಯಮದಲ್ಲಿ ತೀವ್ರ ಸ್ಪರ್ಧೆ ಏರ್ಪಡಲಿದ್ದು, ತಂತ್ರಜ್ಞಾನದ ಯುದ್ಧ ಸಂದಿಗ್ಧತೆ ಸೃಷ್ಟಿಯಾಗಲಿದೆ. ಶೀಥಲ ಸಮರಗಳು ನಡೆಯಲಿದ್ದು, ಎಲ್ಲ ಸ್ಪರ್ಧೆಗಳಿಗೆ ಸದಾ ತೆರೆದುಕೊಂಡಿರುವಂತ ಕೌಶಲ, ಜ್ಞಾನ, ವೇಗವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದು ಬೆಳಗಾವಿ ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಸಲಹೆ ನೀಡಿದರು.

ನಗರದ ಪೂಜ್ಯ ಡಾ.ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ೬ನೇ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ೨೦೩೦ ಮತ್ತು ೨೦೫೦ರ ಕಾಲಘಟ್ಟದ ಭವಿಷ್ಯವನ್ನು ದೃಷ್ಟಿಯಲ್ಲಿ ಕೆಲಸ ಮಾಡಲು ಈಗಿನಿಂದಲೇ ಯೋಜನೆಗಳನ್ನು ಹೊಂದಿರಬೇಕು. ಆರ್ಥಿಕತೆ ಬಲಿಷ್ಠವಾಗಿ ಇಟ್ಟುಕೊಂಡು ಸ್ಮಾರ್ಟ್ ಕೆಲಸ ಮಾಡಬೇಕು. ಬದಲಾವಣೆಗೆ ಸದಾ ಸಿದ್ಧರಾಗಿರಬೇಕು ಎಂದು ಹೇಳಿದರು.

ಪದವೀಧರರಾಗಿ ವಿವಿಯಿಂದ ಹೊರ ಹೋದ ತಕ್ಷಣ ಹಲವು ಮಾರ್ಗಗಳು ತೆರೆದುಕೊಳ್ಳಲಿದ್ದು, ಕೆಲಸಗಾರರಾಗದೆ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮುಂದಡಿ ಇಟ್ಟಾಗ ಯಶಸ್ವಿಯಾಗಲು ಸಾಧ್ಯ. ಕೃತಕ ಬುದ್ಧಿಮತ್ತೆ (ಎಐ)ಯಂತ ನವ ತಂತ್ರಜ್ಞಾನಗಳನ್ನು ಅರಿತು, ನಾಳಿನ ಸಮಸ್ಯೆಗೆ ಇಂದೇ ಪರಿಹಾರ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಶರಣಬಸವ ವಿವಿಯೂ ಅತ್ಯಂತ ಕಡಿಮೆ ಅವದಿಯಲ್ಲಿಯೇ ಉನ್ನತ ಶಿಕ್ಷಣದಲ್ಲಿ ಮಹತ್ವದ ಮೈಲಿಗಲ್ಲು ಸೃಷ್ಟಿಸುತ್ತಿದೆ. ಕಾಯಕ, ಸ್ತಿಸಬಲೀಕರಣದಂತಹ ಸಮಾನತೆ, ಸಾಮಾಜಿಕ ಮೌಲ್ಯಗಳನ್ನು ಬೋಧಿಸುತ್ತಿದೆ. ಮಹಿಳೆಯರಿಗೆ ಪ್ರತ್ಯೇಕ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಂತ ಮಹತ್ಕಾರ್ಯ ಮಾಡಿದೆ.

ಸ್ವಾಮಿ ವಿವೇಕಾನಂದ, ಐನ್‌ಸ್ಟೆನ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ಥಾಮಸ್ ಎಡಿಸನ್‌ನಂತ ಸಾಧಕರ ಮಧ್ಯೆ, ಶಂಕರ, ರಾಮಾನುಜ, ಮಧ್ಯ, ಬುದ್ಧ, ಟ್ಯಾಗೋರ್‌ರಂತ ದಾರ್ಶನಿಕರು ಜೀವನದ ಬದಲಾವಣೆಗೆ ಶಕ್ತಿ ತುಂಬುತ್ತಾರೆ.

ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ಯಮ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಗಾಳಿ ನೀರಿನಂತೆ ಶಿಕ್ಷಣವೂ ಪ್ರಮುಖ ಜೀವನಾಧಾರವಾಗಿದೆ. ಇಂತಹ ಅಕ್ಷರ ಜ್ಞಾನ ನೀಡುವ ಶೈಕ್ಷಣಿಕ ನೆಲೆಗಟ್ಟನ್ನು ಒದಗಿಸುವ ಮಹತ್ಕಾರ್ಯವನ್ನು ಡಾ.ಶರಣಬಸಪ್ಪ ಅಪ್ಪ ಮಾಡುತ್ತಿದ್ದಾರೆ. ವಿದ್ಯೆಗಾಗಿ ಈ ಭಾಗದ ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳಲ್ಲಿಗೆ ಹೋಗುವಂತ ಸ್ಥಿತಿ ಸೃಷ್ಟಿಯಾಗಿತ್ತು. ಅದನ್ನು ತಪ್ಪಿಸಿ, ಜಿಲ್ಲೆಯಲ್ಲಿ ಹಲವು ವಿವಿ, ಮೆಡಿಕಲ್ ಕಾಲೇಜು, ಇಂಜಿನಿಯರ್ ಕಾಲೇಜುಗಳ ಸ್ಥಾಪನೆಗೆ ಮೂಲ ಪ್ರೇರಣೆ ಪೂಜ್ಯ ಡಾ.ಅಪ್ಪ ಎಂದು ಹೇಳಿದರು.

ಕುಲಪತಿ ಡಾ.ಅನೀಲಕುಮಾರ ಬಿಡವೆ ಸ್ವಾಗತಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ, ಚಿ.ದೊಡ್ಡಪ್ಪ ಅಪ್ಪ, ಸಂಸ್ಥೆ ಕಾರ್ಯದರ್ಶಿ ಬಸವರಾಜ ದೇಶಮುಖ, ನಿರ್ದೇಶಕ ಡಾ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಸಣ್ಣಬಸಣ್ಣಗೌಡ ಡೊಳ್ಳೆಗೌಡರ, ಕುಲಸಚಿವ ಮೌಲ್ಯಮಾಪನ ಡಾ.ಎಸ್.ಎಸ್.ಹೊನ್ನಳ್ಳಿ, ಡೀನ್ ಡಾ.ಲಕ್ಷಿö್ಮ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಪ್ರೊ.ಕಿರಣ ಮಾಕಾ ಇತರರಿದ್ದರು.