ಹಾಸನ : ಕಾಯಕವನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಕೈಲಾಸ ಕಾಣಬೇಕು ಎಂದು ಹೇಳಿದ ವಚನಕಾರ ನುಲಿಯ ಚಂದಯ್ಯ ಅವರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಂಡಾಗ ಮಾತ್ರ ಇಂತಹ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಶಾಂತಲಾ ಅವರು ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನುಲಿಯ ಚಂದಯ್ಯ ಜಯಂತಿ ಆಚರಣೆ ಸಮಿತಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶರಣ ನುಲಿಯ ಚಂದಯ್ಯನವರು ಕೆರೆಯ ಹಿನ್ನೀರಿನ ದಡದಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು ಹಗ್ಗ ಹೊಸೆದು, ಮಾರಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದರು. ಚಂದಯ್ಯ ಅವರು ಕಾಯಕಯೋಗಿ ಬಸವಣ್ಣನವರ ಸಮಕಾಲೀನವರಾಗಿದ್ದರು. ಪ್ರತಿಯೊಬ್ಬರೂ ಕಾಯಕವನ್ನು ಮಾಡಿ ಕೈಲಾಸ ಕಾಣಬೇಕು ಎಂಬುದು ಇವರ ಧ್ಯೇಯವಾಗಿತ್ತು. ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ನುಲಿಯ ಚಂದಯ್ಯ ಅವರ ಜಯಂತಿ ಆಚರಣೆ ಮಾತ್ರ ಸೀಮಿತವಾಗಬಾರದು. ಬದಲಾಗಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರಭುಶಂಕರ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ಲಿಂಗ ಜಂಗಮ ಈ ವಿಷಯಕ್ಕೆ ಹೆಚ್ಚಿನ ಒತ್ತು ನೀಡಿದರು, ಚಂದಯ್ಯನವರು ಕಾಯಕದಿಂದ ಮಾತ್ರ ಕೈಲಾಸ ಪಡೆಯಬೇಕು ಎಂಬುದನ್ನು ನಂಬಿದವರು ಎಂದರು. ಇದೇ ವೇಳೆ ನುಲಿಯ ಚಂದಯ್ಯನವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನೂ ಸುದೀರ್ಘವಾಗಿ ವಿವರಿಸಿದರು.