ಬಾಗಲಕೋಟೆ: ಪ್ರತಿಯೊಬ್ಬರು ಕಾಯಕ ನಿಷ್ಟರಾಗಬೇಕು. ಮಾಡುವ ಕಾಯಕದಲ್ಲಿ ಮೇಲು ಕೀಳುಗಳೆನ್ನದೇ ಅದರಲ್ಲಿ ಕೈಲಾಸ ಕಾಣುವಂತಾಗಬೇಕು ಎಂದು ಶಾಸಕ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಾಯ್.ಮೇಟಿ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸವಿತಾ ಮಹರ್ಷಿ ಮೂಲ ದೇವಾನು ದೇವತೆಗಳಿಗೆ ಕ್ಷೌರಿಕನಾಗಿದ್ದರಿಂದ ಕ್ಷೌರಿಕರ ಮೂಲ ಪುರುಷನಾಗಿದ್ದಾರೆ. ಇಂತಹ ಮಹಾತ್ಮರ ಸಮುದಾಯದವರು ಶಿಕ್ಷಣ ಪಡೆಯುವದರ ಜೊತೆಗೆ ವೃತ್ತಿಯಲ್ಲಿ ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ ಬಳಕೆ ಸಹ ಮುಖ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ ಮಾತನಾಡಿ ಸೂರ್ವಿತ ಎಂಬುದು ಸೂರ್ಯನಿಗೆ ಕರೆಯುವ ಹೆಸರಾಗಿದ್ದು, ಸೂರ್ಯನು ತನ್ನ ಪಥ ಬದಲಿಸಿ ಬರುವ ಈ ದಿನ ರಥಸಪ್ತಮಿಯಾಗಿದ್ದು, ಅಂದೇ ಸವಿತಾ ಮಹರ್ಷಿ ಅವತರಿಸಿದ್ದಾರೆ. ಬ್ರಹ್ಮನ ನಾಭಿಯಿಂದ ಹುಟ್ಟಿದ ಋಷಿಯಾಗಿದ್ದರಿಂದ ಈ ಸಮಾಜದವರಿಗೆ ನಾವಿಕರು ಎಂದು ಕರೆಯುವರು. ಅಲ್ಲದೇ ಶಿವನ ಕ್ಷೌರ ಮಾಡಿ ಶಿವನಿಗೆ ತುಂಬಾ ಹತ್ತಿರವಾದವರಾದವರು ಸವಿತಾ ಮಹರ್ಷಿ. ಮನುಷ್ಯ ಪಾಪ ಕರ್ಮಗಳ ಪ್ರತೀಕವಾಗಿ ಕೂದಲುಗಳು ಬೆಳೆಯುತ್ತಿದ್ದರಿಂದ ದೇವಸ್ಥಾನಗಳಿಗೆ ಮುಡಿಕೊಡುವ ಪದ್ದತಿ ಇದ್ದು, ಇಂದಿದೂ ಪ್ರಸ್ತುತಿ ಇದೆ ಎಂದರು.
ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ ಇತಿಹಾಸ ಅರಿಯದವರು ಇತಿಹಾಸ ಸೃಷ್ಠಿಮಾಡಲಾರರು ಎಂಬ ನಾನ್ನುಡಿಯನ್ನು ಪ್ರತಿಯೊಬ್ಬರೂ ಗಮನಿಸಿ ಇತಿಹಾಸ ಅರಿವ ಕಾರ್ಯವಾಗಬೇಕು. ಸವಿತಾ ಮಹರ್ಷಿಯಂತಹ ಸಮುದಾಯದವರು ಅವರ ಆಚರಣೆ, ಉದ್ದೇಶ ಹಾಗೂ ಮೌಲ್ಯವನ್ನು ಅರಿತಾಗ ಮಾತ್ರ ಜಯಂತಿ ಆಚರಿಸಿದಕ್ಕೂ ಸ್ವಾರ್ಥಕತೆ ಬರುತ್ತದೆ. ಆಯುರ್ವೇದದಲ್ಲಿ ಪರಿಣಿತ ಹೊಂದಿದ ಶಿವನ್ನು ಹತ್ತಿರ ಆದವರು ಹಾಗೂ ಸಂಗೀತದಲ್ಲಿ ಒಲವನ್ನು ಹೊಂದಿದವರು ಸವಿತಾ ಮಹರ್ಷಿ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ರಾಮಣ್ಣ ಗೋಗಿ ಮಾತನಾಡಿ ಕಶ್ಯಪ ಮುನಿಗೆ ಅದಿತಿಯಲ್ಲಿ ಜನಿಸಿದ ಸವಿತಾ ಮಹರ್ಷಿ ಪುರಾಣದ ಪ್ರಕಾರ ಶಿವನು ಅತಿಯಾಗಿ ಬೆಳೆದ ಕೂದಲುಗಳಿಂದ ತೊಂದರೆ ಅನುಭವಿಸುತ್ತಿದ್ದಾಗ ಪಾರ್ವತಿ ದೇವಿಯ ಸಲಹೆಯಂತೆ ತನ್ನ ಎಡಗಣ್ಣಿನಿಂದ ಕ್ಷೌರಿಕರ ಮೂಲ ಪುರುಷರಾದದವರು. ಆಯುರ್ವೇದ ಈ ಜನಾಂಗದ ಉಪಕಸಬಾಗಿ ಬಂದಿದೆ. ಈ ಸಮುದಾಯದವರು ಒಗ್ಗಟ್ಟಾದಾಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಕ್ಷೌರಿಕ, ಆಯುರ್ವೇಧ ಹಾಗೂ ಸಂಗೀತದಲ್ಲಿ ಪರಿಣಿತಿಯನ್ನು ಹೊಂದಿದವರು ಸವಿತಾ ಮಹರ್ಷಿ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಸಮುದಾಯದ ಮುಖಂಡರಾದ ಶರಣಬಸಪ್ಪ ಶಹಾಪೂರ, ಗಣೇಶ ಶಹಾಪೂರ, ರೇಖಾ ಉಪಸ್ಥಿತರಿದ್ದರು.