ಅಥಣಿ ಗ್ರಾಮೀಣ: ಗುರುವಿನಲ್ಲಿ ಭಕ್ತಿ, ಕಾಯಕದಲ್ಲಿ ಶ್ರದ್ಧೆ ಇದ್ದರೆ ಜೀವನದಲ್ಲಿ ಅದ್ಭುತ ಶಕ್ತಿ ದೊರೆತು ಯಶಸ್ಸು ಸಿಗುವುದು ಖಚಿತ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದ ಅಡ್ಡಪಲ್ಲಕ್ಕಿ ಉತ್ಸವ ಪುರಪ್ರವೇಶ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವರು ಗುರುವಿಗಿಂತ ಹೆಚ್ಚು ತನ್ನ ಶರೀರ, ಆಸ್ತಿ, ಹಣ, ಕಾರು, ಬಂಗಲೆ, ಬಂಗಾರದಂತಹ ವಸ್ತುಗಳಿಗೆ ಬೆಲೆ ನೀಡುತ್ತಿದ್ದಾರೆ. ಆದರೆ, ಗುರು ಕಾರಣವಿರದಿದ್ದರೆ ಲೌಕಿಕ ಮತ್ತು ಭೌತಿಕ ಸಂಪತ್ತು ಉಳಿಯುವುದಿಲ್ಲ ಎಂಬ ಸತ್ಯವನ್ನು ಮರೆತಿದ್ದಾರೆ. ಜೀವನದಲ್ಲಿ ಅತಿಯಾಸೆ ಬೇಡ, ಗುರು ಎಲ್ಲರಿಗೂ ಎಷ್ಟು ಬೇಗ ಭಾಗ್ಯಗಳನ್ನು ಕೊಡಬೇಕೆಂದು ಮೊದಲೇ ನಿರ್ಧರಿಸುತ್ತಾನೆ. ಹಾಗಂತ ಕೆಲಸ ಮಾಡುವುದನ್ನು ನಿಲ್ಲಿಸಬಾರದು. ಸತ್ಯ, ಶುದ್ಧ ಕಾಯಕದಲ್ಲಿ ದೇವರಿದ್ದಾನೆ. ಆತ್ಮಶುದ್ಧಿಗೆ ಪ್ರಾರ್ಥನೆ, ಧ್ಯಾನ, ಗುರುವಿನ ಸೇವೆ ಅತಿ ಅವಶ್ಯ ಎಂದರು.
ಕೊಕಟನೂರ ಮಾಂಜರಿ ಕಾಡಸಿದ್ಧೇಶ್ವರಮಠದ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯರು ಮಾತನಾಡಿ, ಕೊಕಟನೂರ ಗ್ರಾಮ ಐತಿಹಾಸಿಕ ತಾಣವಾಗಿದ್ದು, ವೀರಭದ್ರ, ಯಲ್ಲಮ್ಮ, ಕಲ್ಮೇಶ್ವರ, ಹನುಮಾನ, ಭ್ರಮರಾಂಬಿಕಾ, ಮಲ್ಲಿಕಾರ್ಜುನ ದೇವಾಲಯಗಳ ಕಲ್ಲು ಶಿಲೆಯಲ್ಲಿ ಪುರಾತನ ಇತಿಹಾಸ ಗೊಚರಿಸುತ್ತಿದೆ. ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ ನಾವು ಭಾಗ್ಯವಂತರು. ಈ ನೆಲದ ಪಾವಿತ್ರ$್ಯ ಕಾಪಾಡಲು ಯುವಜನತೆ ದುಶ್ಚಟಗಳಿಗೆ ಬಲಿಯಾಗಬಾರದು. ಧರ್ಮಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಸದಾ ಅನ್ನದಾಸೋಹ ನಡೆಯುತ್ತಿರಬೇಕು. ಅಂದಾಗ ಮಾತ್ರ ಜಗದ್ಗುರುಗಳ ಆಶೀರ್ವಾದ ಲಭಿಸುತ್ತದೆ ಎಂದರು.
ಗುರುಮೂರ್ತಯ್ಯ ಕಾಡದೇವರಮಠ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ಕೆಪಿಸಿಸಿ ಸದಸ್ಯ ಶ್ಯಾಮರಾವ ಪೂಜಾರಿ, ವಿಶಾಲ ದೇಸಾಯಿ, ಶಿವಗೌಡ ನೇಮಗೌಡ, ಸುರೇಶ ಪಾಟಣಕರ, ಸುಭಾಷ ಸೋನಕರ, ರಾವಸಾಬ ಹಳಕಿ, ಅನಿಲ ಮುಳಿಕ, ಬಂಡು ಜಾಧವ, ಗೂಳಪ್ಪ ಪೂಜಾರಿ, ಅಣ್ಣಪ್ಪ ಮಂಟೂರ, ಕಾಂತು ಮಾದರ, ಅರುಣ ಮುದಕಣ್ಣವರ ಇತರರಿದ್ದರು.