ಬಸವಕಲ್ಯಾಣ: ನರೇಗಾ ಯೋಜನೆಯ ಸಮರ್ಪಕ ನಿರ್ವಹಣೆಗೆ ಸರ್ಕಾರದಿಂದ ಕಾಯಕ ಬಂಧು ಎಂಬ ಪರಿಕಲ್ಪನೆಯನ್ನು ರೂಪಿಸಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಸುಲ್ಫಿ ಹೇಳಿದರು.
ನರೇಗಾ ಯೋಜನೆಯ ಕಾಯಕ ಬಂಧುಗಳ ತರಬೇತುದಾರರ ತರಬೇತಿ ನಿಮಿತ್ತ ಗುರುವಾರ ತಾಲೂಕಿನ ಕಲಖೋರಾ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆದ ವಿವಿಧ ಕಾಮಗಾರಿಗಳ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ತರಬೇತಿಯಲ್ಲಿ ಮಾಸ್ಟರ್ ಟ್ರೇನರ್‌ಗಳು ಮುಂದಿನ ದಿನಗಳಲ್ಲಿ ಆಯಾ ಗ್ರಾಪಂಗಳ ವ್ಯಾಪ್ತಿಯಲ್ಲಿರುವ ಕಾಯಕ ಬಂಧುಗಳಿಗೆ ತರಬೇತಿ ನೀಡುವರು. ಈ ಮೂಲಕ ನರೇಗಾ ಯೋಜನೆಯ ಯಶಸ್ವಿ ಅನುಸ್ಠಾನದ ಪಾಲುದಾರಿಕೆಯಲ್ಲಿ ನುರಿತ ಕಾಯಕ ಬಂಧುಗಳು ಕೈಜೋಡಿಸಲಿದ್ದಾರೆ ಎಂದರು.
ಕಲಖೋರಾ ಗ್ರಾಪಂ ಪಿಡಿಒ ಕವಿತಾ ಮಾತನಾಡಿ, ನರೇಗಾ ಕೂಲಿ ಕಾರ್ಮಿಕರಿಗೆ ಇದುವರೆಗೆ ಸಮರ್ಪಕ ಕೂಲಿ ಕೆಲಸ ನೀಡಿದ್ದು, ಯೋಜನೆಯಡಿ ರೈತರು ತೆರೆದ ಬಾವಿ, ದನದ ಶೆಡ್ ಮುಂತಾದ ಕಾಮಗಾರಿಗಳನ್ನು ಪಡೆದುಕೊಂಡಿದ್ದಾರೆ ಎಂದರು.
ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಯೋಜನಾ ಸಂಯೋಜಕ ನಾಗರಾಜ ಶೀಲವಂತ ಪ್ರಾಸ್ತಾವಿಕ ಮಾತನಾಡಿ ನಿರೂಪಣೆ ಮಾಡಿದರು. ಗ್ರಾಪಂ ಕಾರ್ಯದರ್ಶಿ ಸುನಿಲ್ ಝಿಳ್ಳೆ, ಕರ ವಸೂಲಿಗಾರ ಶೇಖರ ಹಾಗೂ ಸಿಬ್ಬಂದಿ ಇತರರಿದ್ದರು.
ಮಕ್ಕಳ ಪಂಚಾಯತ್ ಅರಿವು ಕಾರ್ಯಕ್ರಮ: ಗ್ರಾಪಂ ಸಭಾಂಗಣದಲ್ಲಿ ಮಕ್ಕಳ ಪಂಚಾಯತ್ ಅರಿವು ಕಾರ್ಯಕ್ರಮ ನಡೆಯಿತು. ಕಲಖೋರಾದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳನ್ನುದ್ದೇಶಿಸಿ ತಾಪಂ ಇಒ ರಮೇಶ್ ಸುಲ್ಪಿ ಮಾತನಾಡಿ, ಗ್ರಾಪಂನಲ್ಲಿರುವ ವಿವಿಧ ಯೋಜನೆ, ಕಾರ್ಯವೈಖರಿ, ಮಕ್ಕಳ ಗ್ರಾಮಸಭೆ, ವಿವಿಧ ಕ್ರಿಯಾ ಯೋಜನೆ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿದರು.
ಬೀದಿ ನಾಟಕ: ಕಲಖೋರಾದ ಮುಖ್ಯ ಬೀದಿಯಲ್ಲಿ ತರಬೇತಿಯ ಮಾಸ್ಟರ್ ಟ್ರೆನೇರ್‌ಗಳು ಬೀದಿ ನಾಟಕ ಪ್ರದರ್ಶಿಸಿ ನರೇಗಾ ಯೋಜನೆ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು.