ಜಿಲ್ಲೆ

ಕಾಯಕ ನಿಷ್ಠೆಯಿಂದ ಮೆಚ್ಚುಗೆ ಗಳಿಸಿ

ಚಿಕ್ಕಬಳ್ಳಾಪುರ: ಪೊಲೀಸರು ಜನರ ರಕ್ಷಣೆಗೆ ಸದಾ ಬದ್ಧರಾಗಿರಬೇಕು. ಕರ್ತವ್ಯ ನಿಷ್ಠೆ, ಉತ್ತಮ ಕಾರ್ಯನಿರ್ವಹಣೆ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತರಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸಿಬ್ಬಂದಿಗೆ ಸಲಹೆ ನೀಡಿದರು.

ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ತಾಲೂಕಿನ ಅಣಕನೂರಿನಲ್ಲಿರುವ ಜಿಲ್ಲಾ ಪೊಲೀಸ್ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಪ್ರಶಂಸನಾ ಪತ್ರ ವಿತರಿಸಿ, ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕರೊನಾ ಸೋಂಕಿನ ಸಂದರ್ಭದಲ್ಲಿ ಆತಂಕದ ನಡುವೆಯೂ ಜವಾಬ್ದಾರಿಯನ್ನು ನಿರ್ವಹಿಸಿದ್ದು, ಬಹಳಷ್ಟು ಸಿಬ್ಬಂದಿ ಒತ್ತಡಕ್ಕೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತಿದೆ ಎಂದರು.

ಕೆಲಸದ ಒತ್ತಡದಿಂದ ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಹೆಚ್ಚು. ಎಲ್ಲೆಡೆಯಂತೆ ಜಿಲ್ಲೆಯಲ್ಲೂ ಅನೇಕ ಪೊಲೀಸರು ಕರೊನಾ ಸೋಂಕಿಗೆ ತುತ್ತಾಗಿದ್ದು ಇದೇ ವೇಳೆ ಪ್ರತ್ಯೇಕ ಚಿಕಿತ್ಸೆ ವ್ಯವಸ್ಥೆ, ಸುರಕ್ಷತೆಯ ಪರಿಕರ ವಿತರಣೆ ಸೇರಿ ಅಗತ್ಯ ನೆರವು ಒದಗಿಸಲಾಯಿತು ಎಂದರು.

ಸನ್ಮಾನ, ಪ್ರಶಂಸನಾ ಪತ್ರ ವಿತರಣೆ : ಬಾಕಿ ಉಳಿದಿದ್ದ ಪ್ರಕರಣಗಳ ತನಿಖೆ ಬೇಗ ಮುಗಿಸಿ, ಅಂತಿಮ ವರದಿ ಸಲ್ಲಿಕೆ, ಸಾರ್ವಜನಿಕರಿಂದ ಪಡೆದಿರುವ ದೂರುಗಳಿಗೆ ತುರ್ತಾಗಿ ಸ್ಪಂದನೆ, ಹೆಚ್ಚಿನ ಪ್ರಕರಣಗಳಲ್ಲಿ ಮಾಲುಗಳನ್ನು ನ್ಯಾಯಾಲಯಕ್ಕೆ ನೀಡಿ ಪಿಆರ್ ಸಂಖ್ಯೆಗಳನ್ನು ಪಡೆಯುವಿಕೆ, ಗುಪ್ತ ಮಾಹಿತಿ ಸಂಗ್ರಹ, ಅಪರಾಧ ಪತ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತ ಸ್ಥಳಗಳಿಗೆ ತ್ವರಿತ ಭೇಟಿ, ಸುಗಮ ವಾಹನಗಳ ಸಂಚಾರಕ್ಕೆ ಅನುವು ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರಗಳನ್ನು ನೀಡಲಾಯಿತು.