ಹನೂರು: ಸಾಮಾಜಿಕ ಆಂದೋಲನದಲ್ಲಿ ಹಡಪದ ಅಪ್ಪಣ್ಣ ಅವರ ಕೊಡುಗೆ ಅಪಾರ. ಅವರ ಕಾಯಕ ನಿಷ್ಠೆ ಸಮಾಜಕ್ಕೆ ದಾರಿದೀಪ ಎಂದು ಪ್ರಭಾರ ತಹಸೀಲ್ದಾರ್ ಧನಂಜಯ ಅಭಿಪ್ರಾಯಪಟ್ಟರು.
ಪಟ್ಟಣದ ಲೋಕೋಪಯೋಗಿ ಅತಿಥಿಗೃಹದ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಅಚರಣೆ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಸವನ ಬಾಗೇವಾಡಿ ಸಮೀಪದ ಮಸಬಿನಾಳ ಗ್ರಾಮದಲ್ಲಿ ಜನಿಸಿದ ಹಡಪದ ಅಪ್ಪಣ್ಣ ಅವರು, ಬಸವಣ್ಣ ಅವರಿಗೆ ತಾಂಬೂಲ ತಯಾರು ಮಾಡುವ ಕಾಯಕವನ್ನು ನಿರ್ವಹಿಸುತ್ತಿದ್ದರಲ್ಲದೇ ಅನುಭವ ಮಂಟಪದ ಕಾರ್ಯದರ್ಶಿಯಾಗಿದ್ದರು. ಇವರು 12ನೇ ಶತಮಾನದ ವಚನ ಚಳವಳಿ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದು, ಸುಮಾರು 200ಕ್ಕೂ ವಚನಗಳನ್ನು ರಚಿಸುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಶರಣರಿಗೆ ಇರಬೇಕಾದ ಕಾಯಕನಿಷ್ಠೆ, ಭಕ್ತಿ, ಆಚಾರ-ವಿಚಾರಗಳನ್ನು ವಚನಗಳಲ್ಲಿ ಸಾಹಿತ್ಯೀಕರಿಸಿದ್ದು, ಸಮಾಜದಲ್ಲಿದ್ದ ಮೌಢ್ಯತೆಯನ್ನು ಹೋಗಲಾಡಿಸಲು ಪಣ ತೊಟ್ಟಿದ್ದರು. ಇವರ ಆದರ್ಶ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಎಲ್ಲ ವರ್ಗಕ್ಕೂ ಸ್ಫೂರ್ತಿದಾಯಕವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇವರ ತತ್ವ- ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಕಾಯಕನಿಷ್ಠೆ ಮೆರೆಯಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದರಮ್ಮ, ಬಿಇಒ ಶಿವರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು, ಸೆಸ್ಕ್ ಎಇ ರಂಗಸ್ವಾಮಿ, ಉಪನೋಂದಣಾಧಿಕಾರಿ ಉಷಾ, ಪ.ಪಂ. ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಶಿರಸ್ತೇದಾರ್ ನಾಗೇಂದ್ರ, ಆರ್‌ಐ ಮಹದೇವಸ್ವಾಮಿ, ಗ್ರಾಮಲೆಕ್ಕಿಗ ಶೇಷಣ್ಣ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಪಾಂಡು, ತಾಲೂಕು ಗೌರವಾಧ್ಯಕ್ಷ ರಾಜು, ಅಧ್ಯಕ್ಷ ಮಹದೇವ, ಕಂದಾಯ ಇಲಾಖೆಯ ನೌಕರರು ಇತರರು ಇದ್ದರು.