ಜಿಲ್ಲೆ

ಕಾಯಕ ತತ್ವ ಬೆಳವಣಿಗೆಗೆ ಪೂರಕ

ಚಿತ್ರದುರ್ಗ: ಶರಣರೆ ಆಚರಣೆಯ ಮೂಲಕ ತೋರಿಸಿಕೊಟ್ಟ ಕಾಯಕ ತತ್ವ ಬೆಳವಣಿಗೆಗೆ ಪೂರಕವಾಗಿದ್ದು, ಎಲ್ಲರೂ ಅನುಸರಿಸಿದಲ್ಲಿ ಸುಖಿ ಜೀವನ ನಡೆಸಬಹುದು ಎಂದು ತಹಸೀಲ್ದಾರ್ ಡಾ.ನಾಗವೇಣಿ ಸಲಹೆ ನೀಡಿದರು.

ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ನುಲಿಯ ಚಂದಯ್ಯ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮಹನೀಯರ ಜೀವನ, ಸಂದೇಶ, ತತ್ವಾದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿವೆ ಎಂದರು.

ನಿವೃತ್ತ ಶಿಕ್ಷಕ ವಿ.ಟಿ.ಚಂದಯ್ಯ ಮಾತನಾಡಿ, ಚಂದಯ್ಯ ಅವರು ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಆರ್.ನುಲೇನೂರಿನಲ್ಲಿ ಐಕ್ಯರಾದರು. ಅವರ ಜನ್ಮ ವೃತ್ತಾಂತವನ್ನು ಭಾರತೀಯ ಪುರಾತತ್ವ ಇಲಾಖೆ ಸಂಶೋಧಿಸಿ, ಪರಿಚಯಿಸುವ ಕೆಲಸ ಮಾಡಿದೆ ಎಂದು ತಿಳಿಸಿದರು.

ಸುಂದರ, ಸರಳ ಬದುಕು ನಡೆಸಿದ ಶರಣ-ಶರಣೆಯರೆಲ್ಲರ ಕಾಯಕ, ದಾಸೋಹ ತತ್ವ ವಿಶ್ವಕ್ಕೆ ಮಾದರಿಯಾಗಿದೆ. ನಾವೆಲ್ಲರೂ ಆ ಹಾದಿಯಲ್ಲಿ ಸಾಗಿ, ದೇಶ ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕೊರಮ ಸಮಾಜದ ಅಧ್ಯಕ್ಷ ಕೆ.ಕೃಷ್ಣಪ್ಪ ಮಾತನಾಡಿ, ನಮ್ಮ ಸಮಾಜದವರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಂಕಷ್ಟದಿಂದ ಬದುಕು ಸಾಗಿಸುತ್ತಿದ್ದಾರೆ. ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ, ಸಮುದಾಯ ಭವನ ನಿರ್ಮಾಣಕ್ಕಾಗಿ ನಗರದಲ್ಲಿ ನಿವೇಶನ ಮಂಜೂರು ಮಾಡಬೇಕು. ನುಲಿಯ ಚಂದಯ್ಯ ಹೆಸರನ್ನು ಪ್ರಮುಖ ರಸ್ತೆಗೆ ನಾಮಕರಣ ಮಾಡಬೇಕು ಎಂದು ಸರ್ಕಾರಕ್ಕೆ ಕೋರಿದರು.

ಅದ್ದೂರಿ ಮೆರವಣಿಗೆ: ನುಲಿಯ ಚಂದಯ್ಯ ಜಯಂತಿ ಅಂಗವಾಗಿ ನೀಲಕಂಠೇಶ್ವರ ಸ್ವಾಮಿ ದೇಗುಲ ಮುಂಭಾಗದಿಂದ ಹೊರಟ ಅವರ ಭಾವಚಿತ್ರ ಮೆರವಣಿಗೆಗೆ ತಹಸೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಚಾಲನೆ ನೀಡಿದರು. ಪ್ರಮುಖ ವೃತ್ತ, ರಸ್ತೆಗಳ ಮಾರ್ಗವಾಗಿ ಸಂಚರಿಸಿ ರಂಗಮಂದಿರ ತಲುಪಿತು. ಡೋಲು, ತಮಟೆ ಸೇರಿ ವಿವಿಧ ಜಾನಪದ ಕಲಾತಂಡಗಳು ಮೆರಗು ನೀಡಿದವು. ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ಕೆಡಿಪಿ ಜಿಲ್ಲಾ ಸದಸ್ಯ ಕೆ.ಸಿ.ನಾಗರಾಜ್, ಸಮಾಜದ ಮುಖಂಡರಾದ ದ್ವಾರಕನಾಥ್, ಹನುಮಂತಪ್ಪ, ಬಿ.ನರಸಿಂಹಮೂರ್ತಿ, ಗೌರಮ್ಮ, ಜಯಶ್ರೀ, ಪರಮೇಶ್, ಮಹಂತೇಶ್, ಧನಂಜಯ್ ಇತರರಿದ್ದರು.