ಬಸವಕಲ್ಯಾಣ: ಬಸವಾದಿ ಶರಣರ ತತ್ವ, ವಚನ ಸಾಹಿತ್ಯವನ್ನು ಅಳವಡಿಸಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಹೇಳಿದರು.
ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನದಿಂದ ಶನಿವಾರ ಸಂಜೆ ಆಯೋಜಿಸಿದ್ದ ಶರಣ ಸಂಗಮ ಹಾಗೂ ನುಲಿಯ ಚಂದಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ನಿಷ್ಠಯಿಂದ ಮಾಡಿದ ಕಾಯಕದಿಂದ ಬಂದ ಸಂಪಾದನೆಯಿಂದ ಗುರು-ಲಿಂಗ-ಜಂಗಮಕ್ಕೆ ದಾಸೋಹ ಮಾಡಬೇಕು. ಕಾಯಕದಿಂದಲೇ ಜೀವನ್ಮುಕ್ತಿ, ಆತ್ಮೊನ್ನತಿ ಎಂಬುದು ಚಂದಯ್ಯನವರ ವಚನಗಳಿಂದ ತಿಳಿದು ಬರುತ್ತದೆ ಎಂದರು.
ಪ್ರತಿಯೊಬ್ಬ ಜೀವಿಯು ಪರಮಾತ್ಮನ ಅಂಶವಾದ್ದರಿಂದ ಎಲ್ಲರಲ್ಲಿಯೂ ದೇವರು ಇದ್ದಾರೆ. ಅದನ್ನೇ ಚೈತನ್ಯ ಘನಲಿಂಗ ಎಂದು ಕರೆಯಲಾಗುತ್ತದೆ. ಅಂತರಂಗ ಮತ್ತು ಬಹಿರಂಗ ಶುದ್ಧವಾಗಿರಬೇಕು. ಪರಮ ಗುರು ನೋಡುವುದು ಅಂತರಂಗ. ಅದು ಶುದ್ಧಿಯಾದಗಲೇ ಪರಮಾತ್ಮನ ಸಾಕ್ಷತ್ಕಾರವಾಗುವುದು. ಚಂದಯ್ಯನವರ ವಚನಗಳಲ್ಲಿ ಘನಲಿಂಗ ವಿವರಣೆ, ಕಾಯಕ, ದಾಸೋಹ, ನಡೆ-ನುಡಿ, ಗುರು, ಲಿಂಗ, ಜಂಗಮದ ಮಹತ್ವವನ್ನು ಕಾಣಬಹುದು ಎಂದರು.
ಅನುಭವ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಲಿಂಗಾರತಿ ನಾವದಗೇರೆ ಮಾತನಾಡಿ, ೧೨ನೇ ಶತಮಾನದಲ್ಲಿ ಶರಣರು ಕೊಟ್ಟ ಮಹತ್ವಪೂರ್ಣ ಕೊಡುಗೆಗಳಲ್ಲಿ ಕಾಯಕವೂ ಒಂದು. ಅವರು ಕಾಯಕಕ್ಕೆ ಎಷ್ಟೊಂದು ಮಹತ್ವ ಕೊಟ್ಟಿದ್ದರು ಎನ್ನುವುದಕ್ಕೆ ಆಯ್ದಕ್ಕಿ ಲಕ್ಕಮ್ಮ ಹಾಗೂ ನುಲಿಯ ಚಂದಯ್ಯನವರ ವಚನಗಳು ನಿದರ್ಶನ ಎಂದು ಹೇಳಿದರು.
ಚಂದಯ್ಯನವರ ಪ್ರಕಾರ ಸತ್ಯಶುದ್ಧ ಕಾಯಕದಿಂದ ಬಂದದ್ದು ಮಾತ್ರ ಲಿಂಗ- ಜಂಗಮಕ್ಕೆ ಅರ್ಪಿತವಾಗಬೇಕು. ಗುರು, ಲಿಂಗ, ಜಂಗಮವಾದಡೂ ಕಾಯಕ ಮಾಡಬೇಕು ಎಂದು ಹೇಳುವ ಮೂಲಕ ಪೂಜೆಗಿಂತ ಕಾಯಕ ಶ್ರೇಷ್ಠ ಎಂದು ಸಾರಿದ ಚಂದಯ್ಯನವರು ಕಾಯಕ, ದಾಸೋಹ, ಸತ್ಯನಿಷ್ಠೆಯ ಮೂಲಕ ಮಾನವರಿಗೆ ಅರಿವಿನ ಬೆಳಕನ್ನು ನೀಡಿದ್ದಾರೆ ಎಂದರು.
ಎಸ್‌ಬಿಐ ನಿವೃತ್ತ ವ್ಯವಸ್ಥಾಪಕ ಆನಂದಕುಮಾರ ಬಪ್ಪಣ್ಣ ಉದ್ಘಾಟಿಸಿದರು. ಆರ್.ಎಸ್. ಬಿರಾದಾರ್ ಧ್ವಜಾರೋಹಣ ಮಾಡಿದರು. ಕಲ್ಪನಾ ಬೀದೆ ವಚನ ಗಾಯನ ನಡೆಸಿಕೊಟ್ಟರು. ಕಲ್ಪನಾ ಕರಬಸಪ್ಪ ಬೀದೆ, ಸುಷ್ಮಾ ಪವಾಡಶೆಟ್ಟಿ, ಶ್ರೇಯಾಂಕಾ ಕುಂಬಾರ, ಶಿವಕುಮಾರ ಪಾಂಚಾಳ ಇತರರಿದ್ದರು. ನಿರ್ಮಲಾ ಕಲ್ಯಾಣಿ ಸ್ವಾಗತಿಸಿದರು. ಉಷಾ ಮಿರ್ಚೆ ನಿರೂಪಣೆ ಮಾಡಿದರು.