ಹಾಸನ: ಸೇವಾ ಭದ್ರತೆ ಹಾಗೂ ಇತರೆ ಯಾವುದೇ ಸೌಲಭ್ಯ ಇಲ್ಲದೆ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ 15-20 ವರ್ಷಗಳಿಂದ ಯಾವ ಸೌಲಭ್ಯಗಳಿಲ್ಲದೆ, ಕಾಯಮಾತಿ ಇಲ್ಲದೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಕಡಿಮೆ ಸಂಬಳದಲ್ಲಿ ಕುಟುಂಬ ನಿರ್ವಹಣೆ ಭಾರೀ ಕಷ್ಟವಾಗಿದೆ. ಸೇವೆ ಕಾಯಂ ಮಾಡಿಕೊಳ್ಳುವಂತೆ ಸಾಕಷ್ಟು ವರ್ಷಗಳಿಂದ ಆಗ್ರಹಿಸಿದರೂ ಸರ್ಕಾರಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ತಾತ್ಕಾಲಿಕ ಪರಿಹಾರ ನೀಡುವ ಮೂಲಕ ಉಪನ್ಯಾಸಕರ ವೃತ್ತಿಗೆ ಅವಮಾನ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾಂಗ್ರೆಸ್ ನಾಯಕರು ಚುನಾವಣೆಗೂ ಮೊದಲು ಅತಿಥಿ ಶಿಕ್ಷಕರ ಕಾಯಂಗೆ ಯೋಜನೆ ರೂಪಿಸಲಾಗುವುದೆಂದು ಚುನಾವಣೆಗೂ ಮೊದಲು ಘೋಷಿಸಿದ ಪ್ರಣಾಳಿಕೆಯಲ್ಲಿ ಹೇಳಿದ್ದರು. ಅದರಂತೆ ಈಗ ನಡೆದುಕೊಳ್ಳಬೇಕು. ಸರ್ಕಾರ ರಚನೆಯಾಗಿ 6 ತಿಂಗಳ ಕಾಲ ಆಡಳಿತ ನಡೆಸಿದರೂ ಇಲ್ಲಿಯವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಕಾಯಮಾತಿ ಕಾರ್ಯ ಯೋಜನೆಯನ್ನು ರೂಪಿಸಲಾಗುವುದು ಎಂದು ಘೋಷಿಸಬೇಕೇಂದು ಜಿಲ್ಲಾಧಿಕಾರಿ ಮೂಲಕ ಕಾಲೇಜು ಶಿಕ್ಷಣ ಇಲಾಖೆ ಹಾಗು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಸುರೇಶ್, ಮಹಮ್ಮದ್ ಆರೀಫ್ ಕಾರ್ಲೇ, ಅರಸೀಹಳ್ಳಿ ಮಂಜುನಾಥ್, ಧರಣೇಂದ್ರ, ಚೇತನ್, ಕುಮಾರ್, ಮಂಜೇಗೌಡ ಇತರರು ಇದ್ದರು.