ಜಿಲ್ಲೆ

ಕಾಮೇನಹಳ್ಳಿ ಗ್ರಾಮದ ದಲಿತ ಕುಟುಂಬಸ್ಥರು ಪ್ರತಿಭಟನೆ

ಹಾಸನ: ದಶಕಗಳಿಂದ ಪರಿಶಿಷ್ಟ ಜಾತಿ ಕುಟುಂಬಗಳು ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನನ್ನು ಬೇರೆಯವರು ಖಾತೆ ಮಾಡಿಕೊಂಡಿದ್ದು, ಜಿಲ್ಲಾಡಳಿತ ತಮಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ತಾಲೂಕಿನ ಕಾಮೇನಹಳ್ಳಿ ಗ್ರಾಮದ ದಲಿತ ಕುಟುಂಬಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸಾಲಗಾಮೆ ಹೋಬಳಿ ಕಾಮೇನಹಳ್ಳಿ ಗ್ರಾಮದ ಸರ್ವೆ ನಂ. 125 ರಿಂದ 128ರಲ್ಲಿ ಸುಮಾರು 180 ದಲಿತ ಕುಟುಂಬಗಳು ಕಳೆದ 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿವೆ. ಅದರಲ್ಲಿ 150 ಕುಟುಂಬಗಳು ಜಮೀನನ್ನು ಎಲ್‌ಆರ್‌ಎಫ್ ಆದೇಶದ ಮೇರೆಗೆ ಮಂಜೂರು ಮಾಡಿಸಿಕೊಂಡಿದ್ದಾರೆ. ಉಳಿದ 35 ಕುಟುಂಬಸ್ಥರು ಅರ್ಜಿ ಸಲ್ಲಿಸಿದ್ದರೂ ಜಮೀನು ಮಂಜೂರಾಗದ ಹಿನ್ನಲೆ ಸಮಸ್ಯೆಯಾಗಿದೆ. ಒಟ್ಟು 15 ಎಕರೆ 35 ಗುಂಟೆ ಜಮೀನು ಉಳುಮೆದಾರರಿಗೆ ಖಾತೆಯಾಗದೆ ಸಮಸ್ಯೆ ತಂದೊಡ್ಡಿದೆ ಎಂದರು.
1976ರ ಉಳುವವನೆ ಭೂಮಿಯ ಒಡೆಯ ಕಾಯ್ದೆ ಜಾರಿಯಾದಾಗಲೇ ಜಮೀನು ಮಂಜೂರು ಮಾಡಿಕೊಡಬೇಕಿತ್ತು. ಆದರೆ ದಲಿತರು ಅನಕ್ಷರಸ್ಥರಾಗಿದ್ದರಿಂದ ಆ ನಿಟ್ಟಿನಲ್ಲಿ ಗಮನ ಹರಿಸಲಿಲ್ಲ. ಅಂದಿನಿಂದಲೂ ಕೇವಲ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಈಗ ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ. ತಹಶೀಲ್ದಾರ್ ಹಾಗು ಜಿಲ್ಲಾಧಿಕಾರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಮದ ದೇವರಾಜು, ರಾಜು, ಅಯ್ಯಣ್ಣ, ವೆಂಕಟಣ್ಣ, ಹನುಮಂತ, ಕರಿಯಣ್ಣ, ಕೃಷ್ಣ, ಮಲ್ಲೇಶ್, ಚೌಡಮ ಇತರರಿದ್ದರು.