ನ್ಯಾಯಾಲಯ 
ಜಿಲ್ಲೆ

ಕಾಮುಕನಿಗೆ 30 ವರ್ಷ ಜೈಲು ಶಿಕ್ಷೆ

ಕಲಬುರಗಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅತ್ಯಾಚಾರಿಗೆ 30 ವರ್ಷ ಜೈಲು ಶಿಕ್ಷೆ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಆದೇಶಿಸಿದ್ದಾರೆ. ಶಹಾಬಾದ್‌ನ ಚುನ್ನಾ ಬಟ್ಟಿಯ ಅಜಯ ದೋತ್ರೆ ಅತ್ಯಾಚಾರ ಆರೋಪಿ. 2022 ಮೇ 17ರಂದು ಅತ್ಯಾಚಾರಿ ಅಜಯನು ಶಹಾಬಾದ್ ನಗರದಲ್ಲಿ ಬಾಲಕಿಯನ್ನು ತಿರುಪತಿ ತೋರಿಸುತ್ತೇನೆ ಎಂದು ಪುಸಲಾಯಿಸಿ, ಒತ್ತಾಯದಿಂದ ಕರೆದುಕೊಂಡು ಹೋಗಿದ್ದಾನೆ. ಎರಡು ದಿನ ತಿರುಪತಿ ಸುತ್ತಾಡಿಸಿ, ತಿರುಪತಿ ಚೆನ್ನೆ ಹೆದ್ದಾರಿಯಲ್ಲಿನ ದೆಮೀನೇಡು ಪ್ರದೇಶದಲ್ಲಿ ತಿರುಚನೂರು ರಾಮಕ್ಕ ಚಿರುವು ಕೆರೆಯ ಬಳಿಯ ಕೋಣೆಯಲ್ಲಿ ಬಾಲಕಿಯನ್ನು ಕೂಡಿಹಾಕಿ, ಐದು ದಿನ ನಿರಂತರ ಅತ್ಯಾಚಾರ ಎಸಗಿದ್ದಾನೆ. ನಂತರ ೨೦೨೩ ಮೇ ೨೯ರಂದು ಶಹಾಬಾದ್‌ಗೆ ಕರೆತಂದು ಬಿಟ್ಟಿದ್ದು, ವಿಷಯ ಯಾರಿಗಾದರೂ ಹೇಳಿದರೆ ಖಲ್ಲಾಸ್ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಈ ಕುರಿತು ಶಹಾಬಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಪಿ.ಐ.ರಾಘವೇಂದ್ರ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ವಿಚಾರಣೆ ನಡೆಸಿ, ೩೦ ವರ್ಷ ಜೈಲು ಶಿಕ್ಷೆ, 20 ಸಾವಿರ ದಂಡ ಶಿಕ್ಷೆ ವಿಧಿಸಿದ್ದಾರೆ. ನೊಂದ ಬಾಲಕಿಗೆ ಕಾನೂನು ಪ್ರಾಧಿಕಾರದಿಂದ ಏಳು ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ತುಪ್ಪದ ಸರ್ಕಾರದ ಪರ ವಾದಿಸಿದ್ದರು. ವಸಂತ ಎಚ್.ಸಿ. ಸಾಕ್ಷಿದಾರರನ್ನು ಹಾಜರುಪಡಿಸಿದ್ದರು.